AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಸ್ಟ್ ಟಿ20 ವಿಶ್ವಕಪ್​ನಲ್ಲಿ ಟ್ವಿಸ್ಟ್​: ಪಾಕಿಸ್ತಾನ್ ಬದಲಿಗೆ ಬಾಂಗ್ಲಾದೇಶ್​ಗೆ ಚಾನ್ಸ್​?

T20 World Cup 2026: ಟಿ20 ವಿಶ್ವಕಪ್ 2026 ಫೆಬ್ರವರಿ 7 ರಿಂದ ಶುರುವಾಗಲಿದೆ. ಈ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಬೆದರಿಕೆಯೊಡ್ಡಿದೆ. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಕೈ ಬಿಟ್ಟಿರುವುದು. ಇದೀಗ ಪಾಕಿಸ್ತಾನ್ ತಂಡಕ್ಕೆ ಬಾಂಗ್ಲಾದೇಶ್ ಮೂಲಕವೇ ಪ್ರತ್ಯುತ್ತರ ನೀಡಲು ಐಸಿಸಿ ಮುಂದಾಗಿದೆ.

ಟ್ವಿಸ್ಟ್ ಟಿ20 ವಿಶ್ವಕಪ್​ನಲ್ಲಿ ಟ್ವಿಸ್ಟ್​: ಪಾಕಿಸ್ತಾನ್ ಬದಲಿಗೆ ಬಾಂಗ್ಲಾದೇಶ್​ಗೆ ಚಾನ್ಸ್​?
Bangladesh
ಝಾಹಿರ್ ಯೂಸುಫ್
|

Updated on: Jan 28, 2026 | 9:31 AM

Share

ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡವು ಹೊರಗುಳಿದರೆ ಬಾಂಗ್ಲಾದೇಶ್ ತಂಡಕ್ಕೆ ಚಾನ್ಸ್ ಸಿಗಲಿದೆ. ಇಂತಹದೊಂದು ಟ್ವಿಸ್ಟ್ ನೀಡಲು ಐಸಿಸಿ ಮುಂದಾಗಿದೆ. ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಿಟ್ಟಿರುವುದನ್ನು ಖಂಡಿಸಿ ಪಾಕಿಸ್ತಾನ್ ತಂಡವು ಮುಂಬರುವ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಒಂದು ವೇಳೆ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿದರೆ ಬಾಂಗ್ಲಾದೇಶ್ ತಂಡಕ್ಕೆ ಮತ್ತೆ ಅವಕಾಶ ನೀಡಲು ಐಸಿಸಿ ಮುಂದಾಗಲಿದೆ. ಏಕೆಂದರೆ ಪಾಕಿಸ್ತಾನದ ಪಂದ್ಯಗಳು ನಡೆಯಬೇಕಿರುವುದು ಶ್ರೀಲಂಕಾದಲ್ಲಿ. ಅತ್ತ ಬಾಂಗ್ಲಾದೇಶ್ ತಂಡದ ಬೇಡಿಕೆ ಕೂಡ ಪಂದ್ಯಗಳ ಸ್ಥಳಾಂತರ. ಹೀಗಾಗಿ ಪಾಕ್ ತಂಡ ಹೊರಗುಳಿದರೆ ಐಸಿಸಿ ಬಾಂಗ್ಲಾದೇಶ್ ತಂಡಕ್ಕೆ ಮತ್ತೊಮ್ಮೆ ಅವಕಾಶ ನೀಡುವುದು ಖಚಿತ ಎನ್ನಲಾಗಿದೆ.

ಬಾಂಗ್ಲಾದೇಶ್ ಹೊರಬಿದ್ದಿದ್ದೇಕೆ?

ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡಲು ಬಾಂಗ್ಲಾದೇಶ್ ನಿರಾಕರಿಸಿದೆ. ಅಲ್ಲದೆ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರ ಮಾಡುವಂತೆ ಐಸಿಸಿಗೆ ಬೇಡಿಕೆಯಿಟ್ಟಿತ್ತು. ಆದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.

ಅಷ್ಟೇ ಅಲ್ಲದೆ ಭಾರತದಲ್ಲೇ ಟೂರ್ನಿ ಆಡುವಂತೆ ಸೂಚಿಸಿದೆ. ಈ ಸೂಚನೆಯ ಹೊರತಾಗಿಯೂ ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶ್ ಹಿಂದೇಟು ಹಾಕಿದೆ. ಹೀಗಾಗಿ ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಕೈ ಬಿಟ್ಟು ಅವರ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ.

ಪಾಕಿಸ್ತಾನ್ ನಡೆಯೇನು?

ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಿಟ್ಟಿರುವುದನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಖಂಡಿಸಿದೆ. ಅಷ್ಟೇ ಅಲ್ಲದೆ ಬಾಂಗ್ಲಾಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಬೆದರಿಕೆಯೊಡ್ಡಿದೆ. ಈ ಬೆದರಿಕೆ ಬೆನ್ನಲ್ಲೇ ಐಸಿಸಿ, ಪಾಕ್ ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ರವಾನಿಸಿದೆ.

ಟಿ20 ವಿಶ್ವಕಪ್​ನಿಂದ ಹಿಂದೆ ಸರಿದರೆ ಪಾಕ್ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್​​ನ ಮಾನ್ಯತೆ ರದ್ದು ಮಾಡುವುದಾಗಿ ಐಸಿಸಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಎಚ್ಚರಿಕೆ ನೀಡಿದೆ. ಇದಾಗ್ಯೂ ಪಿಸಿಬಿ ಭಂಡ ದೈರ್ಯ ಪ್ರದರ್ಶಿಸಲು ಮುಂದಾಗುತ್ತಿದೆ.

ಅಂದರೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುವುದರ ಬಗ್ಗೆ ಇನ್ನೂ ಸಹ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಹೀಗಾಗಿಯೇ ಪಾಕ್​ಗೆ ಬಿಸಿ ಮುಟ್ಟಿಸಲು ಐಸಿಸಿ ಮತ್ತೊಂದು ಪ್ಲ್ಯಾನ್ ರೂಪಿಸಿದೆ.

ಪಾಕ್​ ಬದಲಿಗೆ ಬಾಂಗ್ಲಾ:

ಒಂದು ವೇಳೆ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿದರೆ, ಪಾಕ್ ತಂಡದ ಸ್ಥಾನದಲ್ಲಿ ಬಾಂಗ್ಲಾದೇಶ್ ತಂಡವನ್ನು ಕಣಕ್ಕಿಳಿಸಲು ಐಸಿಸಿ ಯೋಜನೆ ರೂಪಿಸಿದೆ. ಅಂದರೆ ಇಲ್ಲಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಬೇಡಿಕೆ ಇರುವುದು ತನ್ನ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರ ಮಾಡಬೇಕೆಂಬುದು.

ಅತ್ತ ಪಾಕಿಸ್ತಾನದ ಎಲ್ಲಾ ಪಂದ್ಯಗಳು ನಡೆಯಲಿರುವುದು ಶ್ರೀಲಂಕಾದಲ್ಲಿ. ಹೀಗಾಗಿ ಪಾಕ್ ತಂಡ ಹೊರಗುಳಿದರೆ ಬಾಂಗ್ಲಾದೇಶ್ ತಂಡವನ್ನು ಗ್ರೂಪ್-ಎ ಗೆ ಆಯ್ಕೆ ಮಾಡುವ ಮೂಲಕ ಶ್ರೀಲಂಕಾದಲ್ಲಿ ಕಣಕ್ಕಿಳಿಯಲು ಅನುವು ಮಾಡಿಕೊಡಲು ಐಸಿಸಿ ನಿರ್ಧರಿಸಿದೆ.

ಐಸಿಸಿಯ ಈ ಮಾಸ್ಟರ್ ಸ್ಟ್ರೋಕ್​ನಿಂದ ಕಂಗೆಟ್ಟಿರುವುದು ಪಾಕಿಸ್ತಾನ್. ಏಕೆಂದರೆ ಪಾಕಿಸ್ತಾನ್ ಟಿ20 ವಿಶ್ವಕಪ್​ನಿಂದ ಹೊರಗುಳಿಯಲು ನಿರ್ಧರಿಸಿರುವುದು ಬಾಂಗ್ಲಾದೇಶ್​ಗೆ ಬೆಂಬಲವಾಗಿ. ಈ ಬೆಂಬಲದೊಂದಿಗೆ ಪಾಕಿಸ್ತಾನ್ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ, ಅದೇ ಸ್ಥಾನದಲ್ಲಿ ಬಾಂಗ್ಲಾದೇಶ್ ತಂಡವನ್ನು ಕಣಕ್ಕಿಳಿಸಲು ಐಸಿಸಿ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: 6,6,6,6,6,6,6,6,6: ಶರವೇಗದ ಶತಕದೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್

ಹೀಗಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಹೆಚ್ಚು. ಏಕೆಂದರೆ ಪಾಕಿಸ್ತಾನ್ ಟಿ20 ವಿಶ್ವಕಪ್​ನಿಂದ ಹೊರಗುಳಿದರೂ, ಆ ಸ್ಥಾನದಲ್ಲಿ ಬಾಂಗ್ಲಾದೇಶ್ ಕಣಕ್ಕಿಳಿಯುವುದಿಲ್ಲ ಎನ್ನಲು ಸಾಧ್ಯವಿಲ್ಲ. ಇಲ್ಲಿ ಪಾಕ್ ನೀಡಿದ ಬೆಂಬಲಕ್ಕಿಂತ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ಗೊಡ್ಡು ಬೆದರಿಕೆಯನ್ನು ಬದಲಿಸುವ ಸಾಧ್ಯತೆಯಿದೆ.