ಸೂರ್ಯಕುಮಾರ್ ಯಾದವ್ (Suryakumar Yadav) ಈಗ ಟೀಮ್ ಇಂಡಿಯಾದ ಖಾಯಂ ಸದಸ್ಯನಾಗಿ ಹೊರಹೊಮ್ಮಿದ್ದಾರೆ. ಸಾಕಷ್ಟು ಸಮಯದಿಂದ ಸೂಕ್ತ ಆಟಗಾರನಿಗಾಗಿ ಹುಡುಕುತ್ತಿದ್ದ ನಾಲ್ಕನೇ ಕ್ರಮಾಂಕ ಕೂಡ ಭರ್ತಿ ಆಗಿದೆ. ಈ ವರ್ಷ ಅಂತು ಸೂರ್ಯ ಭರ್ಜರಿ ಫಾರ್ಮ್ನಲ್ಲಿದ್ದು ರನ್ ಮಳೆಯನ್ನೇ ಸುರಿಸಿದ್ದಾರೆ. ಇದಕ್ಕಾಗಿ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನ ಕೂಡ ಅಲಂಕರಿಸಿದ್ದಾರೆ. 2022 ರಲ್ಲಿ 700 ರನ್ಗಳ ಗಡಿ ದಾಟಿರುವ ಇವರು ಟಿ20 ಕ್ರಿಕೆಟ್ನಲ್ಲಿ (T20 Cricket) ಭಾರತದ ಯಾವ ಬ್ಯಾಟರ್ ಕೂಡ ಮಾಡದ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಒಂದು ಸಾವಿರ ರನ್ಗಳ ಕ್ಲಬ್ ಸೇರಲು ಕೇವಲ 24 ರನ್ ಅಷ್ಟೇ ಬೇಕಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಹೀಗಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ (Mohammad Kaif) ಅವರು ಸೂರ್ಯಕುಮಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಕೈಫ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸೂರ್ಯಕುಮಾರ್ ಬಗ್ಗೆ ಟ್ವೀಟ್ ಮಾಡಿ ಹೊಗಳಿದ್ದಾರೆ. ”ಟಾಪ್ ಕ್ಲಾಸ್ ವೇಗಿಗಳಿರಲಿ ಅಥವಾ ಸ್ಪಿನ್ನರ್‌ಗಳಿರಲಿ, ಟರ್ನಿಂಗ್ ಅಥವಾ ಸೀಮಿಂಗ್ ಪಿಚ್‌ಗಳಿರಲಿ, ಕಷ್ಟಕರವಾದ ಪಂದ್ಯದ ಪರಿಸ್ಥಿತಿ ಇದ್ದರೂ ಇದು ಯಾವುದೂ ಸೂರ್ಯನನ್ನು ಕಾಡುವುದಿಲ್ಲ. ಅವನು ಆರೆಂಜ್ ಕ್ಯಾಪ್, ಪಂದ್ಯಶ್ರೇಷ್ಠವನ್ನು ಗೆಲ್ಲದಿರಬಹುದು ಆದರೆ ಅವನು ನಿಮಗೆ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಾನೆ,” ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಜೊತೆಗೆ ಸೂರ್ಯ ಅವರ ಫೋಟೋ ಕೂಡ ಹಂಚಿಕೊಂಡಿದ್ದಾರೆ.
Top class pacers or spinners, turning or seaming pitches, difficult match situation – nothing bothers Surya. He might not win orange cap, MoM but he will win you matches. No.4 pe rumal daal diya Surya ne, he’s not moving for a long time. @surya_14kumar pic.twitter.com/hVbPt2oQBp
— Mohammad Kaif (@MohammadKaif) September 29, 2022
ನೂತನ ದಾಖಲೆಯತ್ತ ಸೂರ್ಯಕುಮಾರ್:
ಅಕ್ಟೋಬರ್ 2 ರಂದು ಭಾನುವಾರ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ- ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಇದರಲ್ಲಿ ಸೂರ್ಯಕುಮಾರ್ ಹೊಸ ಮೈಲಿಗಲ್ಲು ತಲುಪುವ ಅವಕಾಶವಿದೆ. ಇನ್ನೂ 24 ರನ್ ಗಳಿಸಿದರೆ ವರ್ಷವೊಂದರಲ್ಲಿ 1000 ರನ್ ಪೂರೈಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ 2018 ರಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ 689 ರನ್ ಬಾರಿಸಿ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಹೊಂದಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಆ ದಾಖಲೆ ಮೀರಿದ್ದು, 1 ಸಾವಿರ ರನ್ ಸನಿಹದಲ್ಲಿದ್ದಾರೆ. ಸದ್ಯ ಸೂರ್ಯಕುಮಾರ್ 32 ಟಿ20 ಪಂದ್ಯಗಳಿಂದ 976 ರನ್ ಕಲೆಹಾಕಿದ್ದಾರೆ. 1000 ರನ್ ಪೂರೈಸಿದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ಜೊತೆ 1000 ರನ್ಗಳ ಸರದಾರರ ಪಟ್ಟಿಗೆ ಸೇರಲಿದ್ದಾರೆ.
2022 ರ ಸಾಲಿನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ರನ್ ಮಳೆ ಸುರಿಸುತ್ತಿದ್ದಾರೆ. ಅವರ ಸ್ಟ್ರೈಕ್ರೇಟ್ 180.29 ಆಗಿದೆ. 32 ಟಿ20 ಪಂದ್ಯವಾಡಿರುವ ಸೂರ್ಯಕುಮಾರ್ ಒಟ್ಟಾರೆ 173.35 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಸೂರ್ಯ ಬ್ಯಾಟ್ನಿಂದ ಈವರೆಗೂ 57 ಸಿಕ್ಸರ್ ಮತ್ತು 88 ಬೌಂಡರಿಗಳು ಬಂದಿವೆ.