ಪಾಕಿಸ್ತಾನದ ಸ್ಟಾರ್ ಆಟಗಾರ ಮೊಹಮ್ಮದ್ ರಿಜ್ಚಾನ್ (Mohammed Rizwan) ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಅಭಿಮಾನಿಗಳ ಅಭಿಲಾಷೆಯನ್ನು ಈಡೇರಿಸಲು ಮುಂದಾಗಿದ್ದ ರಿಜ್ವಾನ್ ತಮ್ಮ ರಾಷ್ಟ್ರ ಧ್ವಜವನ್ನು ಕಾಲಿಂದ ತುಳಿದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಪಾಕ್ ತಂಡವು ಲಾಹೋರ್ಗೆ ಬಂದಿಳಿದಿತ್ತು. ಆ ಬಳಿಕ ಲಾಹೋರ್ ಮೈದಾನದಲ್ಲಿ ಅಭ್ಯಾಸವನ್ನು ಆರಂಭಿಸಿದ್ದರು. ಇದೇ ವೇಳೆ ಕೆಲ ಅಭಿಮಾನಿಗಳು ಮೊಹಮ್ಮದ್ ರಿಜ್ವಾನ್ ಅವರಿಂದ ಆಟ್ರೋಗ್ರಾಫ್ ಬಯಸಿದ್ದಾರೆ. ಕೆಲ ಫ್ಯಾನ್ಸ್ ಗ್ಯಾಲರಿಯಿಂದ ಕ್ಯಾಪ್, ಟಿ ಶರ್ಟ್ಗಳನ್ನು ನೀಡುವ ಮೂಲಕ ರಿಜ್ವಾನ್ ಅವರಿಂದ ಸಹಿ ಹಾಕಿಸಿಕೊಂಡಿದ್ದರು. ಇದೇ ವೇಳೆ ಪಾಕ್ ಕ್ರಿಕೆಟ್ ಪ್ರೇಮಿಯೊಬ್ಬ ರಾಷ್ಟ್ರ ಧ್ವಜವನ್ನು ಎಸೆದಿದ್ದಾನೆ.
ಅತ್ತ ಅದನ್ನು ಸ್ವೀಕರಿಸಿ ಮೊಹಮ್ಮದ್ ರಿಜ್ವಾನ್ ಸಹಿ ಹಾಕಿದ್ದರು. ಆದರೆ ಹೀಗೆ ಆಟೋಗ್ರಾಫ್ ಹಾಕುವ ವೇಳೆ ಪಾಕ್ ಕ್ರಿಕೆಟಿಗ ಧ್ವಜವನ್ನು ನೆಲಕ್ಕೆ ಹಾಕಿದ್ದರು. ಅಲ್ಲದೆ ಇದೇ ವೇಳೆ ಅವರ ಕಾಲುಗಳು ಧ್ವಜದ ಭಾಗದಲ್ಲಿತ್ತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೊಹಮ್ಮದ್ ರಿಜ್ವಾನ್ ಪಾಕ್ ಧ್ವಜವನ್ನು ತುಳಿದಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪಾಕ್ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿರುವ ರಿಜ್ವಾನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.