T20 World Cup: ಬುಮ್ರಾ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಿದ ಬಿಸಿಸಿಐ! ಸಿರಾಜ್- ಶಾರ್ದೂಲ್​ಗೂ ಅವಕಾಶ

| Updated By: ಪೃಥ್ವಿಶಂಕರ

Updated on: Oct 14, 2022 | 5:06 PM

T20 World Cup 2022: ಇಂಜುರಿಯಿಂದಾಗಿ ಟೀಂ ಇಂಡಿಯಾದ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ.

T20 World Cup: ಬುಮ್ರಾ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಿದ ಬಿಸಿಸಿಐ! ಸಿರಾಜ್- ಶಾರ್ದೂಲ್​ಗೂ ಅವಕಾಶ
ಟೀಂ ಇಂಡಿಯಾ
Follow us on

ಇಂಜುರಿಯಿಂದಾಗಿ ಟೀಂ ಇಂಡಿಯಾದ ಟಿ20 ವಿಶ್ವಕಪ್ (T20 World Cup 2022) ತಂಡದಿಂದ ಹೊರಬಿದ್ದಿದ್ದ ಜಸ್ಪ್ರೀತ್ ಬುಮ್ರಾ (Jasprit Bumrah) ಬದಲಿಗೆ ಮೊಹಮ್ಮದ್ ಶಮಿ (Mohammed Shami) ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಮೊದಲು ಶಮಿ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಇಂಜುರಿಯಿಂದಾಗಿ ಬುಮ್ರಾ ಅವರನ್ನು ಮೆಗಾ ಈವೆಂಟ್‌ನಿಂದ ಹೊರಗಿಟ್ಟಿದ್ದರಿಂದ ಅನುಭವಿ ವೇಗಿಗೆ ಟೀಂ ಇಂಡಿಯಾದ ಕದ ಬರೋಬ್ಬರಿ ಒಂದು ವರ್ಷದ ಬಳಿಕ ತೆರೆದಿದೆ. ಇವರೊಂದಿಗೆ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ (Mohammed Siraj and Shardul Thakur) ಅವರನ್ನು ಬ್ಯಾಕ್‌ಅಪ್‌ ಆಟಗಾರರಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲೇ ಈ ಇಬ್ಬರು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ. ಈ ಹಿಂದೆ ಬುಮ್ರಾ ಅವರಿಂದ ತೆರವಾದ ಸ್ಥಾನಕ್ಕೆ ದೀಪಕ್ ಚಾಹರ್ ಕೂಡ ರೇಸ್‌ನಲ್ಲಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ದೀಪಕ್ ಇಂಜುರಿಗೆ ತುತ್ತಾದ್ದರಿಂದ ಅವರನ್ನು ಸಹ ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಯಿತು.

ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ, ಟೀಂ ಇಂಡಿಯಾದ ಟಿ20 ವಿಶ್ವಕಪ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ಶಮಿ ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದಾರೆ. ಅಲ್ಲದೆ ಅಭ್ಯಾಸ ಪಂದ್ಯಗಳು ಆರಂಭಕ್ಕೂ ಮುನ್ನ ಬ್ರಿಸ್ಬೇನ್‌ನಲ್ಲಿರುವ ತಂಡವನ್ನು ಶಮಿ ಸೇರಿಕೊಳ್ಳಲಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ಖಚಿತಪಡಿಸಿದೆ. ಹಾಗೆಯೇ ಇವರೊಂದಿಗೆ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಬ್ಯಾಕಪ್ ಆಟಗಾರರಾಗಿ ಆಯ್ಕೆ ಮಾಡಿದ್ದು, ಶೀಘ್ರದಲ್ಲೇ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದೆ.

ಭಾರತದ ವೇಗದ ಬೌಲಿಂಗ್ ಲೈನ್ ಅಪ್ ಈಗ ಶಮಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಒಳಗೊಂಡಿದೆ. ಈ ಹಿಂದೆ, ಹಲವಾರು ಮಾಜಿ ಕ್ರಿಕೆಟಿಗರು, ದಿಲೀಪ್ ವೆಂಗ್‌ಸರ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಸೇರಿದಂತೆ ಬಿಸಿಸಿಐನ ಮಾಜಿ ಆಯ್ಕೆಗಾರರು ಶಮಿಯನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಮಂಡಳಿಗೆ ಸಲಹೆ ನೀಡಿದ್ದರು. ಐಪಿಎಲ್ 2022 ರ ಚಾಂಪಿಯನ್ ಗುಜರಾತ್ ಟೈಟಾನ್ಸ್‌ ಪರ ಆಡಿದ್ದ ಶಮಿ 16 ಪಂದ್ಯಗಳಲ್ಲಿ 18.30 ಸ್ಟ್ರೈಕ್ ರೇಟ್‌ನಲ್ಲಿ 20 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

Published On - 4:38 pm, Fri, 14 October 22