ಟಿ20 ಮಾದರಿಯಲ್ಲಿ ಮತ್ತೊಂದು ಮೆಗಾ ಟೂರ್ನಿಗೆ ಕ್ರಿಕೆಟ್ ಜಗತ್ತು ಸಿದ್ಧವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup 2022) ಅಕ್ಟೋಬರ್ 16 ರಿಂದ (ಭಾನುವಾರ) ಆರಂಭವಾಗಲಿದೆ. ಎರಡು ವರ್ಷಗಳ ಕೊರೊನಾ ಕಾಟ ಇಳಿಕೆಯಾದ ನಂತರ ಮೆಗಾ ಟೂರ್ನಮೆಂಟ್ ನಡೆಯುತ್ತಿರುವುದರಿಂದ ಈ ಬಾರಿ ಟಿಕೆಟ್‌ಗೆ ಭಾರಿ ಬೇಡಿಕೆ ಬಂದಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.
ಈ ಮೆಗಾ ಟೂರ್ನಿಗಾಗಿ ಟೀಂ ಇಂಡಿಯಾ ಸೇರಿದಂತೆ ಕೆಲವು ತಂಡಗಳು ಈಗಾಗಲೇ ಆಸ್ಟ್ರೇಲಿಯಾ ತಲುಪಿವೆ. ಇತರ ದೇಶಗಳು ಸಹ ಆಸೀಸ್ ವಿಮಾನ ಹಿಡಿಯುತ್ತಿವೆ. ಅಭ್ಯಾಸ ಪಂದ್ಯಗಳಿಂದ ಈಗಾಗಲೇ ಅಲ್ಲಿ ಕ್ರಿಕೆಟ್ ಅಬ್ಬರ ಶುರುವಾಗಿದೆ. ಮೊದಲ ಸುತ್ತಿನ ಪಂದ್ಯಗಳು ಇದೇ 16 ರಿಂದ ಆರಂಭವಾಗಲಿವೆ. ಸೂಪರ್ 12 ರಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಪಡೆಯಲು ಎಂಟು ತಂಡಗಳು ಮೊದಲ ಸುತ್ತಿನಲ್ಲಿ ಸ್ಪರ್ಧಿಸಲಿವೆ. ಇದೇ ತಿಂಗಳ 22 ರಿಂದ ಸೂಪರ್ 12 ಸ್ಪರ್ಧೆ ಆರಂಭವಾಗಲಿದೆ. ಪ್ರಮುಖ ತಂಡಗಳು ಸೂಪರ್ 12 ರಲ್ಲಿ ಸ್ಪರ್ಧಿಸುತ್ತಿದ್ದು, ಸೂಪರ್ 12 ರಲ್ಲಿ ಸ್ಥಾನ ಪಡೆಯುವ ತಂಡಗಳಿಗೆ ಮಾತ್ರ ವಿಶ್ವಕಪ್ ಗೆಲ್ಲುವ ಅವಕಾಶವಿರಲಿದೆ.
ಸೂಪರ್-12 ರ ಮೊದಲ ಪಂದ್ಯ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಕಿಕ್ಕಿರಿದ ಪ್ರೇಕ್ಷಕರ ಮಧ್ಯೆ ಸಿಡ್ನಿ ಮೈದಾನದಲ್ಲಿ ನಡೆಯುವ ಈ ಪಂದ್ಯ ಕಳೆದ ವರ್ಷದ ಫೈನಲ್ ಪಂದ್ಯವನ್ನು ನೆನಪಿಸುವ ಸಾಧ್ಯತೆ ಇದೆ. ಐಸಿಸಿ ಟಿ20 ವಿಶ್ವಕಪ್‌ನ ಮುಖ್ಯಸ್ಥ ಮಿಚೆಲ್ ಎನ್‌ರೈಟ್ ಟಿಕೆಟ್ ವಿತರಣೆಯ ಬಗ್ಗೆ ಮಾತನಾಡಿದ್ದು, ಈ ಭಾನುವಾರದ ಸೂಪರ್-12 ಪಂದ್ಯಗಳು ಮತ್ತು ಆರಂಭಿಕ ಪಂದ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ನೋಡಲು ನಾವು ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಪ್ರತಿ ಪಂದ್ಯದ ಟಿಕೆಟ್‌ಗಳು ಬಿಡುಗಡೆಯಾದ ತಕ್ಷಣ ಸೋಲ್ಡ್ ಔಟ್ ಆಗಿವೆ ಎಂದು ಸಂಘಟಕರು ತಿಳಿಸಿದ್ದಾರೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಭಾರೀ ಬೇಡಿಕೆ ಇದೆಯಂತೆ.
ಗೀಲಾಂಗ್‌ನಲ್ಲಿರುವ 36,000 ಸಾಮರ್ಥ್ಯದ ಕಾರ್ಡಿನಿಯಾ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲ್ಲಿರುವ ಯುಎಇ vs ನೆದರ್‌ಲ್ಯಾಂಡ್ಸ್ ಪಂದ್ಯ ಹಾಗೂ ಶ್ರೀಲಂಕಾ vs ನಮೀಬಿಯಾ ಪಂದ್ಯಕ್ಕೆ ಈಗಾಗಲೇ ಟಿಕೆಟ್ ಬಿಡುಗಡೆ ಮಾಡಿದ್ದು, ಕೇವಲ ಬೆರಳೆಣಿಕೆ ಟಿಕೆಟ್‌ಗಳು ಮಾತ್ರ ಉಳಿದಿವೆ ಎಂದು ಸಂಘಟಕರು ಬಹಿರಂಗಪಡಿಸಿದ್ದಾರೆ.
Published On - 4:32 pm, Fri, 14 October 22