MS Dhoni Birthday: ಧೋನಿಯ ಈ 7 ದಾಖಲೆಗಳನ್ನು ಅಳಿಸಿ ಹಾಕುವುದು ಕಷ್ಟಸಾಧ್ಯ
MS Dhoni Birthday: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 2004 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಧೋನಿ ಈಗಲೂ ಕ್ರಿಕೆಟ್ ಅಂಗಳದಲ್ಲಿ ಮುಂದುವರೆದಿರುವುದು ವಿಶೇಷ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರೂ 43 ವರ್ಷದ ಧೋನಿ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
MS Dhoni
ಭಾರತ ತಂಡ ಕಂಡಂತಹ ಗ್ರೇಟೆಸ್ಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಇಂದು 43ನೇ ಹುಟ್ಟುಹಬ್ಬದ ಸಂಭ್ರಮ. ರಾಂಚಿಯಲ್ಲಿ ಜುಲೈ 7, 1981 ರಂದು ಜನಿಸಿದ ಧೋನಿ ತಮ್ಮ ವೃತ್ತಿಜೀವನದಲ್ಲಿ ಭಾರತಕ್ಕೆ ಹಲವು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಅಷ್ಟೇ ತಮ್ಮ 15 ವರ್ಷದ ಕ್ರಿಕೆಟ್ ಕೆರಿಯರ್ನಲ್ಲಿ ಧೋನಿ ಹಲವು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೂ ನಾಯಕನಾಗಿ ಇಡೀ ವಿಶ್ವದಲ್ಲೇ ಯಾರೂ ಮಾಡದ ಸಾಧನೆಗಳನ್ನು ಮಾಡಿದ್ದಾರೆ. ಈ ಸಾಧನೆಗಳ ನಡುವೆ ಜೆರ್ಸಿ ನಂಬರ್ 7 ಆಟಗಾರನ ಹೆಸರಿನಲ್ಲಿ 7 ಅಭೂತಪೂರ್ವ ದಾಖಲೆಗಳಾವುವು ಎಂದು ನೋಡೋಣ…
- ಹಾಫ್ ಸೆಂಚುರಿ ದಾಖಲೆ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 5 ವಿಭಿನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದ ಏಕೈಕ ಆಟಗಾರ ಧೋನಿ. ಮೂರು, ನಾಲ್ಕು, ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಧೋನಿ ಹಾಫ್ ಸೆಂಚುರಿ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.
- ಶತಕವೀರ: ಟೀಮ್ ಇಂಡಿಯಾ ಪರ ಮಹೇಂದ್ರ ಸಿಂಗ್ ಧೋನಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಎರಡು ಶತಕಗಳನ್ನು ಬಾರಿಸಿದ್ದಾರೆ. ವಿಶ್ವದ ಯಾವುದೇ ಬ್ಯಾಟರ್ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒಂದಕ್ಕಿಂತ ಹೆಚ್ಚು ಸೆಂಚುರಿ ಸಿಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ದಾಖಲೆಯನ್ನು ಅಭೂತಪೂರ್ವ ಸಾಧನೆ ಎಂದು ಪರಿಗಣಿಸಲಾಗುತ್ತದೆ.
- ಬೆಸ್ಟ್ ಫಿನಿಶರ್: ಐಪಿಎಲ್‌ನಲ್ಲಿ 229 ಇನಿಂಗ್ಸ್ ಆಡಿರುವ ಧೋನಿ ಕೊನೆಯ ಓವರ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ. ಅಂದರೆ ಒಟ್ಟಾರೆ ಪಂದ್ಯಗಳ ಕೊನೆಯ ಓವರ್ಗಳಿಂದ ಸಿಎಸ್ಕೆ ನಾಯಕ ಕಲೆಹಾಕಿದ್ದು ಬರೋಬ್ಬರಿ 667 ರನ್ಗಳು.
- ಕ್ಯಾಪ್ಟನ್ ಕೂಲ್: 200 ಏಕದಿನ, 70 ಟೆಸ್ಟ್‌ಗಳು ಮತ್ತು 72 ಟಿ20 ಪಂದ್ಯಗಳು ಸೇರಿದಂತೆ ಒಟ್ಟು 332 ಮ್ಯಾಚ್ಗಳಲ್ಲಿ ಧೋನಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿ ಕಾಣಿಸಿಕೊಂಡ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
- ಬೆಸ್ಟ್ ವಿಕೆಟ್ ಕೀಪರ್: ಐಪಿಎಲ್ನ ಯಶಸ್ವಿ ವಿಕೆಟ್ ಕೀಪರ್ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. ಸಿಎಸ್ಕೆ ನಾಯಕ 148 ಕ್ಯಾಚ್ ಔಟ್ ಮತ್ತು 42 ಸ್ಟಂಪಿಂಗ್ ಮೂಲಕ ಧೋನಿ 190 ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.
- ಅಜೇಯ ಧೋನಿ: ವಿಶ್ವದ ಬೆಸ್ಟ್ ಫಿನಿಶರ್ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಪಂದ್ಯಗಳಲ್ಲಿ 84 ಬಾರಿ ನಾಟೌಟ್ ಆಗಿ ಹಿಂತಿರುಗಿದ್ದರು. ಇದು ಕೂಡ ವಿಶ್ವ ದಾಖಲೆ ಎಂಬುದು ವಿಶೇಷ.
- ಕ್ಯಾಪ್ಟನ್ ರೆಕಾರ್ಡ್: ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕನೆಂಬ ವಿಶ್ವ ದಾಖಲೆ ಕೂಡ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಭಾರತಕ್ಕೆ ಮೊದಲ ಟಿ20 ವಿಶ್ವಕಪ್(2007) , ಎರಡನೇ ಏಕದಿನ ವಿಶ್ವಕಪ್ (2011), ಚಾಂಪಿಯನ್ಸ್ ಟ್ರೋಫಿ (2013) ಗೆದ್ದುಕೊಡುವ ಮೂಲಕ ಧೋನಿ ಈ ಅಮೋಘ ಸಾಧನೆ ಮಾಡಿದ್ದಾರೆ.
Published On - 7:37 am, Sun, 7 July 24