ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಟೆಸ್ಟ್ ಸರಣಿಯು ಇಂದಿನಿಂದ (ಡಿ.26) ಶುರುವಾಗಲಿದೆ. 2 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯಕ್ಕೆ ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಇತಿಹಾಸವೊಂದು ನಿರ್ಮಾಣವಾಗಲಿದೆ.
ಏಕೆಂದರೆ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಒಟ್ಟು 9 ಟೆಸ್ಟ್ ಸರಣಿಗಳನ್ನಾಡಿದೆ. ಈ ವೇಳೆ ಒಮ್ಮೆಯೂ ಭಾರತ ತಂಡ ಗೆದ್ದಿಲ್ಲ. ಇದಾಗ್ಯೂ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು.
ಇದೀಗ 2 ಪಂದ್ಯಗಳ ಸರಣಿ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ಸರಣಿ ಸೋಲುವುದನ್ನು ತಪ್ಪಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಸರಣಿ ಜಯಿಸುವ ಅವಕಾಶ ಕೂಡ ಟೀಮ್ ಇಂಡಿಯಾ ಮುಂದಿರಲಿದೆ. ಅದರಲ್ಲೂ ಧೋನಿ ಬಳಿಕ ಸೌತ್ ಆಫ್ರಿಕಾದಲ್ಲಿ ಸರಣಿಯನ್ನು ಡ್ರಾ ಮಾಡಿಕೊಂಡ 2ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರವಾಗಲಿದ್ದಾರೆ.
ಸೌತ್ ಆಫ್ರಿಕಾದಲ್ಲಿ ಭಾರತ ತಂಡ ತನ್ನ ಮೊದಲ ಟೆಸ್ಟ್ ಪಂದ್ಯವಾಡಿದ್ದು 1992 ರಲ್ಲಿ. ಮೊಹಮ್ಮದ್ ಅಝರುದ್ದೀನ್ ನಾಯಕತ್ವದಲ್ಲಿ ಅಂದು ಟೀಮ್ ಇಂಡಿಯಾ 0-1 ಅಂತರದಿಂದ ಸೋಲೊಪ್ಪಿಕೊಂಡಿತ್ತು. ಇದಾದ ಬಳಿಕ 1996 ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಭಾರತ ತಂಡವು 0-2 ಅಂತರದಲ್ಲಿ ಸೋಲನುಭವಿಸಿತ್ತು.
ಅಲ್ಲಿಂದೀಚೆಗೆ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ನಾಯಕರಾಗಿ ಸೌತ್ ಆಫ್ರಿಕಾದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಆದರೆ ಯಾರಿಗೂ ಭಾರತ ತಂಡವನ್ನು ಸರಣಿ ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಇದಾಗ್ಯೂ 2010-11ರಲ್ಲಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಂದು ಸರಣಿಯನ್ನು 1-1 ಅಂತರದಿಂದ ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಸರಣಿಯೊಂದನ್ನು ಹೊರತುಪಡಿಸಿದರೆ ಉಳಿದ 8 ಸರಣಿಗಳಲ್ಲೂ ಟೀಮ್ ಇಂಡಿಯಾ ಪರಾಜಯಗೊಂಡಿದೆ.
ಹೀಗಾಗಿಯೇ ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸರಣಿಯನ್ನು ಡ್ರಾ ಮಾಡಿಕೊಂಡರೆ ಅಥವಾ 2-0 or 1-0 ಅಂತರದಿಂದ ಸರಣಿ ಗೆದ್ದುಕೊಂಡರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಈಶ್ವರನ್.
ಇದನ್ನೂ ಓದಿ: IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!
Published On - 6:57 am, Tue, 26 December 23