
IPL 2026: ಬರೋಬ್ಬರಿ 13 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ನಲ್ಲಿ ಮೊದಲ ಮ್ಯಾಚ್ ಗೆದ್ದಿದೆ. ಅಂದರೆ ಕಳೆದ ಹದಿಮೂರು ವರ್ಷಗಳಲ್ಲಿ ಮುಂಬೈ ಪಡೆ ತನ್ನ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರಲಿಲ್ಲ. ಇಂತಹದೊಂದು ಅನ್ಲಕ್ಕಿ ಓಪನಿಂಗ್ಗೆ ನಾಂದಿಯಾಡಿದ್ದು ಮಾಜಿ ನಾಯಕ ರೋಹಿತ್ ಶರ್ಮಾ ಎಂಬುದು ವಿಶೇಷ.
ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿ ಮೊದಲ ಮ್ಯಾಚ್ ಗೆದ್ದಿದ್ದು 2012 ರಲ್ಲಿ. ಅದು ಸಹ ಹರ್ಭಜನ್ ಸಿಂಗ್ ನಾಯಕತ್ವದಲ್ಲಿ. ಇದಾದ ಬಳಿಕ 2013 ರಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದರು. ಇತ್ತ ಹಿಟ್ಮ್ಯಾನ್ ನಾಯಕನಾದ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಒಮ್ಮೆಯೂ ಮೊದಲ ಮ್ಯಾಚ್ನಲ್ಲಿ ಗೆಲುವು ದಾಖಲಿಸಿರಲಿಲ್ಲ ಎಂಬುದು ವಿಶೇಷ.
ಇನ್ನು ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾದರೂ ಮುಂಬೈ ಇಂಡಿಯನ್ಸ್ ತಂಡ ಎರಡು ಸೀಸನ್ಗಳಲ್ಲಿ ಮೊದಲ ಮ್ಯಾಚ್ನಲ್ಲಿ ಮುಗ್ಗರಿಸಿದ್ದರು. ಆದರೆ ಮೂರನೇ ಸೀಸನ್ನಲ್ಲಿ ರೋಹಿತ್ ಶರ್ಮಾ ಶುರು ಮಾಡಿದ್ದ ದುರಾದೃಷ್ಟಕ್ಕೆ ಬ್ರೇಕ್ ಹಾಕುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 19.1 ಓವರ್ಗಳಲ್ಲಿ 224 ರನ್ ಬಾರಿಸಿ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ 2012ರ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ನ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಪಂದ್ಯದಲ್ಲಿ ಸೋತರೂ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದು ವಿಶೇಷ. ಅಂದರೆ ಮೊದಲ ಮ್ಯಾಚ್ನಲ್ಲಿ ಮುಗ್ಗರಿಸಿದರೂ ಮುಂಬೈ ಪಡೆ ಪ್ರಚಂಡ ಪ್ರದರ್ಶನ ನೀಡುತ್ತಾ ಬಂದಿದೆ.
ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ
ಈ ಮೂಲಕ 2013, 2015, 2017, 2019 ಮತ್ತು 2020 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಮ್ಯಾಚ್ನಲ್ಲೇ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಈ ಶುಭಾರಂಭದೊಂದಿಗೆ ಮುಂಬೈ ಪಡೆ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲಿದೆಯಾ ಕಾದು ನೋಡಬೇಕಿದೆ.
Published On - 8:36 am, Mon, 30 March 26