Irani Cup 2024: 27 ವರ್ಷಗಳ ಬಳಿಕ ಇರಾನಿ ಕಪ್ ಎತ್ತಿ ಹಿಡಿದ ಮುಂಬೈ ತಂಡ

|

Updated on: Oct 05, 2024 | 3:35 PM

Irani Cup 2024: ದೇಶೀಯ ಅಂಗಳದಲ್ಲಿ ಮುಂಬೈ ತಂಡವು 62ನೇ ಟ್ರೋಫಿ ಗೆದ್ದುಕೊಂಡಿದೆ. ರಣಜಿ ಟ್ರೋಫಿಯಲ್ಲಿ 42 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಮುಂಬೈ, 15 ಬಾರಿ ಇರಾನಿ ಕಪ್ ಗೆದ್ದುಕೊಂಡಿದ್ದಾರೆ. ಹಾಗೆಯೇ 4 ಬಾರಿ ವಿಜಯ ಹಝಾರೆ ಟ್ರೋಫಿ, ಒಂದು ಬಾರಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಎತ್ತಿ ಹಿಡಿದಿದೆ.

Irani Cup 2024: 27 ವರ್ಷಗಳ ಬಳಿಕ ಇರಾನಿ ಕಪ್ ಎತ್ತಿ ಹಿಡಿದ ಮುಂಬೈ ತಂಡ
Mumbai Team
Follow us on

ಬರೋಬ್ಬರಿ 27 ವರ್ಷಗಳ ಬಳಿಕ ಮುಂಬೈ ತಂಡವು ಇರಾನಿ ಕಪ್​ಅನ್ನು ಮುಡಿಗೇರಿಸಿಕೊಂಡಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಶೇಷ ಭಾರತ ತಂಡದ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಮುಂಬೈ ಪಡೆ 15ನೇ ಬಾರಿ ಇರಾನಿ ಕಪ್ ಅನ್ನು ಎತ್ತಿ ಹಿಡಿಯಿತು. ಅದರಲ್ಲೂ 1997 ರ ಬಳಿಕ ಮುಂಬೈ ಪಾಲಿಗೆ ಮರೀಚಿಕೆಯಾಗಿದ್ದ ಇರಾನಿ ಕಪ್ ಗೆದ್ದುಕೊಡುವಲ್ಲಿ ಸರ್ಫರಾಝ್ ಖಾನ್ ಯಶಸ್ವಿಯಾಗಿದ್ದಾರೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಶೇಷ ಭಾರತ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಪೃಥ್ವಿ ಶಾ (4) ಹಾಗೂ ಆಯುಷ್ (19) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ಹಾರ್ದಿಕ್ ತಾಮೋರೆ (0) ಶೂನ್ಯಕ್ಕೆ ಔಟಾಗಿದ್ದರು.

ಈ ವೇಳೆ ಕಣಕ್ಕಿಳಿದ ನಾಯಕ ಅಜಿಂಕ್ಯ ರಹಾನೆ (97) ಹಾಗೂ ಶ್ರೇಯಸ್ ಅಯ್ಯರ್ (57) ಆಕರ್ಷಕ ಅರ್ಧಶತಕ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದಾದ ಬಳಿಕ ಶುರುವಾಗಿದ್ದೇ ಸರ್ಫರಾಝ್ ಖಾನ್ ಅವರ ಸಿಡಿಲಬ್ಬರ.

ಸರ್ಫರಾಝ್ ದಾಖಲೆಯ ದ್ವಿಶತಕ:

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸರ್ಫರಾಝ್ ಖಾನ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್​ಗಳನ್ನು ಬಾರಿಸಿದರು. ಈ ಬೌಂಡರಿಗಳೊಂದಿಗೆ ಕೇವಲ 253 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಈ ಮೂಲಕ ಇರಾನಿ ಕಪ್​ನಲ್ಲಿ ಮುಂಬೈ ಪರ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಅಷ್ಟೇ ಅಲ್ಲದೆ ಕೆಳ ಕ್ರಮಾಂಕದ ಬ್ಯಾಟರ್​ಗಳ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಸರ್ಫರಾಝ್ 286 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 25 ಫೋರ್​ಗಳೊಂದಿಗೆ ಅಜೇಯ 222 ರನ್​ ಬಾರಿಸಿದರು. ಈ ಡಬಲ್ ಸೆಂಚುರಿಯ ನೆರವಿನಿಂದ ಮುಂಬೈ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 537 ರನ್​ಗಳಿಸಿ ಆಲೌಟ್ ಆಯಿತು.

ಅಭಿಮನ್ಯು ಮಿಂಚಿಂಗ್:

537 ರನ್​ಗಳ ಬೃಹತ್ ಮೊತ್ತಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಶುರು ಮಾಡಿದ ಶೇಷ ಭಾರತ ತಂಡದ ಪರ ಅಭಿಮನ್ಯು ಈಶ್ವರನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಅಭಿಮನ್ಯು 292 ಎಸೆತಗಳಲ್ಲಿ 16 ಫೋರ್​ ಹಾಗೂ 1 ಸಿಕ್ಸ್​ನೊಂದಿಗೆ 191 ರನ್​ ಬಾರಿಸಿದರು.

ಮತ್ತೊಂದೆಡೆ ಅಭಿಮನ್ಯುಗೆ ಉತ್ತಮ ಸಾಥ್ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ 121 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 93 ರನ್​ ಕಲೆಹಾಕಿದರು. ಇದಾಗ್ಯೂ ಶೇಷ ಭಾರತ ತಂಡವು 416 ರನ್​ಗಳಿಸಿ ಆಲೌಟ್ ಆಯಿತು.

ಮುಂಬೈ ಮೇಲುಗೈ:

121 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ಪೃಥ್ವಿ ಶಾ (76) ಭರ್ಜರಿ ಆರಂಭ ಒದಗಿಸಿದ್ದರು. ಅಲ್ಲದೆ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ತನುಷ್ ಕೋಟ್ಯಾನ್ 150 ಎಸೆತಗಳಲ್ಲಿ ಅಜೇಯ 114 ರನ್ ಬಾರಿಸಿದರು. ಈ ಮೂಲಕ ಮುಂಬೈ ತಂಡವು ಐದನೇ ದಿನದಾಟದಲ್ಲಿ 8 ವಿಕೆಟ್ ಕಳೆದುಕೊಂಡು 329 ರನ್ ಕಲೆಹಾಕಿತು. ಇದರೊಂದಿಗೆ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ.

ಅತ್ತ ಮೊದಲ ಇನಿಂಗ್ಸ್​ನಲ್ಲಿ 121 ರನ್​ಗಳ ಮುನ್ನಡೆ ಸಾಧಿಸಿದ್ದರಿಂದ ಮುಂಬೈ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿದಿದೆ. ಈ ಮೂಲಕ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ಪಡೆಯು 27 ವರ್ಷಗಳ ಬಳಿಕ ಇರಾನಿ ಕಪ್​ ಅನ್ನು ಎತ್ತಿ ಹಿಡಿದಿದೆ. ಇನ್ನು ಈ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಪ್ರಥಮ ಇನಿಂಗ್ಸ್​ನಲ್ಲಿ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸರ್ಫರಾಝ್ ಖಾನ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಆಯುಷ್ ಮ್ಹಾತ್ರೆ , ಶ್ರೇಯಸ್ ಅಯ್ಯರ್ , ಅಜಿಂಕ್ಯ ರಹಾನೆ (ನಾಯಕ) , ಸರ್ಫರಾಝ್ ಖಾನ್ , ಹಾರ್ದಿಕ್ ತಮೋರೆ (ವಿಕೆಟ್ ಕೀಪರ್) , ಶಾರ್ದೂಲ್ ಠಾಕೂರ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ಎಂ ಜುನೇದ್ ಖಾನ್.

ಇದನ್ನೂ ಓದಿ: ಹೆಚ್ಚುವರಿ 36 ಎಸೆತಗಳಿಂದ ಟೀಮ್ ಇಂಡಿಯಾ ಕೈ ತಪ್ಪಿದ ಸಾರ್ವಕಾಲಿಕ ಶ್ರೇಷ್ಠ ದಾಖಲೆ

ಶೇಷ ಭಾರತ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ) , ದೇವದತ್ ಪಡಿಕ್ಕಲ್ , ಅಭಿಮನ್ಯು ಈಶ್ವರನ್ , ಸಾಯಿ ಸುದರ್ಶನ್ , ಇಶಾನ್ ಕಿಶನ್ , ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಮಾನವ್ ಸುತಾರ್ , ಸರನ್ಶ್ ಜೈನ್ , ಯಶ್ ದಯಾಳ್ , ಪ್ರಸಿದ್ಧ್ ಕೃಷ್ಣ , ಮುಖೇಶ್ ಕುಮಾರ್.

 

Published On - 3:33 pm, Sat, 5 October 24