ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೈಸೂರು ತಂಡ, ಬೆಂಗಳೂರು ತಂಡವನ್ನು 45 ರನ್ಗಳಿಂದ ಮಣಿಸಿ ಮೊದಲ ಬಾರಿಗೆ ಮಹಾರಾಜ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಲಷ್ಟೆ ಶಕ್ತವಾಯಿತು.
ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ ನಾಯಕತ್ವದ ಮೈಸೂರು ತಂಡಕ್ಕೆ ಮೊದಲ ವಿಕೆಟ್ಗೆ 29 ರನ್ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಕಾರ್ತಿಕ್ ಸಿ 3 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಂತರ ಕಾರ್ತಿಕ್ ಎಸ್ಯು ಅವರಿಗೆ ಜೊತೆಯಾದ ನಾಯಕ ಕರುಣ್ ಎರಡನೇ ವಿಕೆಟ್ಗೆ 80 ಕ್ಕೂ ಹೆಚ್ಚು ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ಆರಂಭಿಕ ಕಾರ್ತಿಕ್ 44 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 77 ರನ್ ಬಾರಿಸಿ ಔಟಾದರು.
ಆ ನಂತರ 4ನೇ ಕ್ರಮಾಂಕದಲ್ಲಿ ಬಂದ ಹರ್ಷಿಲ್ 6 ರನ್ಗಳಿಗೆ ಸುಸ್ತಾದರೆ, ನಾಯಕ ಕರುಣ್ಗೆ ಜೊತೆಯಾದ ಮನೋಜ್, ನಯನ ಮನೋಹರ ಬ್ಯಾಟಿಂಗ್ ಮಾಡಿದರು. ಈ ಜೋಡಿ ಬೆಂಗಳೂರು ಹಿಡಿತದಲ್ಲಿದ್ದ ಪಂದ್ಯವನ್ನು ತನ್ನೆಡೆಗೆ ಸೆಳೆದುಕೊಂಡಿತು. ನಾಯಕ ಕರುಣ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 66 ರನ್ ಬಾರಿಸಿ ಔಟಾದರೆ, ಕೊನೆಯಲ್ಲಿ ಮನೋಜ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.
19ನೇ ಓವರ್ನಲ್ಲಿ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಮನೋಜ್ ಕೊನೆಯ ಓವರ್ನ ಕೊನೆಯ 4 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಅಂತಿಮವಾಗಿ ಕೇವಲ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ಗಳ ಸಹಿತ ಅಜೇಯ 44 ರನ್ ಬಾರಿಸಿದರು. ಈ ಮೂವರ ಆಟದಿಂದಾಗಿ ಮೈಸೂರು ತಂಡ 207 ರನ್ಗಳ ಬೃಹತ್ ಟಾರ್ಗೆಟ್ ನೀಡಿತು.
ಮೈಸೂರು ನೀಡಿದ 207 ರನ್ಗಳನ್ನು ಬೆನ್ನಟ್ಟಿದ್ದ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗದೆ ಕೇವಲ 9 ರನ್ಗಳಿಗೆ ಮೊದಲ ವಿಕೆಟ್ ಪತನವಾಯಿತು. ನಾಯಕ ಮಯಾಂಕ್ 6 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಂತರ ಬಂದ ಭುವನ್ ಕೂಡ 1 ರನ್ಗಳಿಗೆ ಸುಸ್ತಾದರೆ, ರಕ್ಷಿತ್ ಕೂಡ 5 ರನ್ ಮೀರಿ ಹೊಗಲಿಲ್ಲ.
ಕೆಳಕ್ರಮಾಂಕದಲ್ಲಿ ಆಲ್ರೌಂಡರ್ ಶುಭಾಂಗ್ ಹೆಗ್ಡೆ ಮೇಲೆ ನಿರೀಕ್ಷೆಗಳಿದ್ದವು. ಆದರೆ ಅವರು ಕೂಡ 5 ರನ್ಗಳಿಗೆ ಪೆವಿಲಿಯನ್ ಹಾದಿ ಹಿಡಿದಿರು. ಸೂರಜ್ ಅಹುಜಾ ಕೂಡ 8 ರನ್ಗಳಿಗೆ ಬ್ಯಾಟ್ ಎತ್ತಿಟ್ಟರೆ, ಅನುಭವಿ ಅನಿರುದ್ಧ್ ಜೋಶಿ ಕೂಡ ಯಾವುದೇ ಕಮಾಲ್ ಮಾಡದೆ 18 ರನ್ಗಳಿಗೆ ಸುಸ್ತಾದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಎಲ್ಆರ್ ಚೇತನ್ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 51 ರನ್ ಬಾರಿಸಿ ಸ್ಟಂಪ್ ಔಟ್ಗೆ ಬಲಿಯಾದರು. ಚೇತನ್ ಕ್ರೀಸ್ನಲ್ಲಿ ಇರುವರೆಗೂ ಗೆಲುವಿನ ನಂಬಿಕೆ ಇರಿಸಿಕೊಂಡಿದ್ದ ಬೆಂಗಳೂರು, ಚೇತನ್ ಔಟಾಗುತ್ತಿದ್ದಂತೆ ಪಂದ್ಯವನ್ನು ಕೈಚೆಲ್ಲಿದಂತೆ ವರ್ತಿಸಿತು.
ಇದರ ಪರಿಣಾಮವಾಗಿ ಚೇತನ್ ಬಳಿಕ ಬಂದ ಯಾವುದೇ ಬ್ಯಾಟ್ಸ್‌ಮನ್ ಗೆಲುವಿಗಾಗಿ ಹೋರಾಟ ತೋರದೆ ಒಂದಂಕಿಗೆ ವಿಕೆಟ್ ಒಪ್ಪಿಸಿ, ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಕ್ರಾಂತಿ ಕುಮಾರ್ ಹೊಡಿಬಡಿ ಆಟಕ್ಕೆ ಮುಂದಾದರಾದರೂ ಆ ವೇಳೆಗೆ ಪಂದ್ಯ ಮೈಸೂರು ಕಡೆ ವಾಲಿತ್ತು. ಕೊನೆಯಲ್ಲಿ ಜ್ಞಾನೇಶ್ವರ್ ನವೀನ್ 17 ರನ್ಗಳ ಕೊಡುಗೆ ನೀಡಿದರೆ, ಕ್ರಾಂತಿ ಕುಮಾರ್ 21 ಎಸೆತಗಳಲ್ಲಿ 39 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 pm, Sun, 1 September 24