- Kannada News Photo gallery Cricket photos PAK vs BAN pacer khurram shahzad get 6 wicket hauls vs bangladesh
PAK vs BAN: ತವರಿನಲ್ಲಿ 3 ವರ್ಷಗಳ ಬರ ನೀಗಿಸಿದ ಪಾಕ್ ವೇಗಿ ಖುರ್ರಂ ಶಹಜಾದ್
Khurram Shahzad: ಶಹಜಾದ್ ದಾಳಿಗೆ ಬಾಂಗ್ಲಾದೇಶ ಆರಂಭಿಕ ಜಾಕಿರ್ ಹಸನ್ ಒಂದು ರನ್ ಗಳಿಸಿದರೆ, ನಾಯಕ ನಜ್ಮುಲ್ ಹಸನ್ ಶಾಂಟೊ ನಾಲ್ಕು ರನ್ ಬಾರಿಸಿ ಔಟಾದರು. ಶದ್ಮನ್ ಇಸ್ಮಲ್ ಕೂಡ ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು. ಇಲ್ಲಿಗೇ ನಿಲ್ಲದ ಖುರ್ರಂ ಶಹಜಾದ್, ಅನುಭವಿ ಶಕೀಬ್ ಅಲ್ ಹಸನ್ ಅವರನ್ನು ಔಟ್ ಮಾಡಿದರು.
Updated on: Sep 01, 2024 | 7:02 PM

ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಸರಣಿಯ ಎರಡನೇ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ 274 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಕೇವಲ 26 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

ಬಾಂಗ್ಲಾದೇಶ ತಂಡದ ಈ ಬ್ಯಾಟಿಂಗ್ ಬೆನ್ನೇಲುಬು ಮುರಿಯುವಲ್ಲಿ ಪಾಕ್ ತಂಡದ ಯುವ ವೇಗಿ ಖುರ್ರಂ ಶಹಜಾದ್ ಪಾತ್ರ ಪ್ರಮುಖವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಶಹಬಾದ್, ಬಾಂಗ್ಲಾದೇಶ ತಂಡದ ಪ್ರಮುಖ ಮೂವರು ಬ್ಯಾಟ್ಸ್ಮನ್ಗಳನ್ನು ಕ್ಷಣಾರ್ಧದಲ್ಲಿ ಪೆವಿಲಿಯನ್ಗೆ ಕಳುಹಿಸಿದರು.

ಶಹಜಾದ್ ದಾಳಿಗೆ ಬಾಂಗ್ಲಾದೇಶ ಆರಂಭಿಕ ಜಾಕಿರ್ ಹಸನ್ ಒಂದು ರನ್ ಗಳಿಸಿದರೆ, ನಾಯಕ ನಜ್ಮುಲ್ ಹಸನ್ ಶಾಂಟೊ ನಾಲ್ಕು ರನ್ ಬಾರಿಸಿ ಔಟಾದರು. ಶದ್ಮನ್ ಇಸ್ಮಲ್ ಕೂಡ ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು. ಇಲ್ಲಿಗೇ ನಿಲ್ಲದ ಖುರ್ರಂ ಶಹಜಾದ್, ಅನುಭವಿ ಶಕೀಬ್ ಅಲ್ ಹಸನ್ ಅವರನ್ನು ಔಟ್ ಮಾಡಿದರು.

ಹೀಗಾಗಿ ಬಾಂಗ್ಲಾದೇಶ 26 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ 6 ವಿಕೆಟ್ಗಳಲ್ಲಿ ಖುರ್ರಂ ಒಬ್ಬರೆ ನಾಲ್ಕು ವಿಕೆಟ್ ಪಡೆದರು. ಇದಾದ ಬಳಿಕ ಮೆಹದಿ ಹಸನ್ ಮಿರಾಜ್ ಮತ್ತು ಲಿಟನ್ ದಾಸ್ ನಡುವೆ 165 ರನ್ ಗಳ ಜೊತೆಯಾಟವಿತ್ತು. ಮೆಹದಿ (78) ಅವರನ್ನು ಔಟ್ ಮಾಡುವ ಮೂಲಕ ಖುರ್ರಂ ಟೆಸ್ಟ್‌ನಲ್ಲಿ ಮೊದಲ ಬಾರಿಗೆ 5 ವಿಕೆಟ್‌ಗಳನ್ನು ಪೂರೈಸಿದರು.

ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಕೇವಲ ಮೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಖುರ್ರಂ, ತಸ್ಕಿನ್ ಅಹ್ಮದ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ 6 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಖುರ್ರಂ, ಕಳೆದ ಮೂರು ವರ್ಷಗಳಲ್ಲಿ ಯಾವುದೇ ಪಾಕಿಸ್ತಾನಿ ವೇಗಿ ತವರು ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿಲ್ಲ ಎಂಬ ಕೊರತೆಯನ್ನು ನೀಗಿಸಿದರು

ಈ 3 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಪಾಕಿಸ್ತಾನಿ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಖುರ್ರಂ ಪಾತ್ರರಾದರು. ಅವರಿಗಿಂತ ಮೊದಲು, ಫೆಬ್ರವರಿ 2021 ರಲ್ಲಿ, ರಾವಲ್ಪಿಂಡಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಸನ್ ಅಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 5 ವಿಕೆಟ್‌ಗಳನ್ನು ಪಡೆದಿದ್ದರು. ಕಾಕತಾಳೀಯವೆಂಬಂತೆ ತವರಿನಲ್ಲಿ ಪಾಕಿಸ್ತಾನದ ಕೊನೆಯ ಟೆಸ್ಟ್ ಗೆಲುವು ಕೂಡ ಇದೇ ಪಂದ್ಯದಲ್ಲಿ ಲಭಿಸಿತ್ತು. ಅಂದಿನಿಂದ, ಮುಂದಿನ 9 ಟೆಸ್ಟ್‌ಗಳಲ್ಲಿ, ತಂಡವು 5 ರಲ್ಲಿ ಸೋತಿದ್ದರೆ, 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು.









