
ಮಲೇಷ್ಯಾದ ಬಯುಮಾಸ್ ಓವಲ್‌ನಲ್ಲಿ ನಡೆದ ಎಸಿಸಿ ಪುರುಷರ ಪ್ರೀಮಿಯರ್ ಕಪ್ 2026 ರ ಫೈನಲ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು 44 ರನ್‌ಗಳಿಂದ ಸೋಲಿಸುವ ಮೂಲಕ ನೇಪಾಳ ಕ್ರಿಕೆಟ್ ತಂಡ ಮುಂದಿನ ವರ್ಷ ಅಂದರೆ 2027 ರಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿದೆ. ನೇಪಾಳದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆರಂಭಿಕ ಆಟಗಾರ ಆಸಿಫ್ ಶೇಖ್ ಅದ್ಭುತ ಶತಕ ಬಾರಿಸುವ ಮೂಲಕ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಈ ಗೆಲುವಿನೊಂದಿಗೆ, ಸಂದೀಪ್ ಲಾಮಿಚಾನೆ ನಾಯಕತ್ವದ ನೇಪಾಳ ತಂಡವು ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ 6ನೇ ತಂಡವಾಗಿ ಕಣಕ್ಕಿಳಿಯಲಿದೆ.
ಮೇಲೆ ಹೇಳಿದಂತೆ ಎಸಿಸಿ ಪ್ರೀಮಿಯರ್ ಕಪ್ ಗೆದ್ದುಕೊಂಡ ನೇಪಾಳ ಆರನೇ ಮತ್ತು ಅಂತಿಮ ತಂಡವಾಗಿ ಏಷ್ಯಾಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಬಾರಿಯ ಏಷ್ಯಾಕಪ್ ಅನ್ನು ಏಕದಿನ ಸ್ವರೂಪದಲ್ಲಿ ಆಡಲಾಗುತ್ತಿದ್ದು, ಪರಿಣಾಮವಾಗಿ ಕೇವಲ ಆರು ತಂಡಗಳು ಮಾತ್ರ ಭಾಗವಹಿಸುತ್ತವೆ. ಕಳೆದ ಏಷ್ಯಾಕಪ್‌ನಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಆದರೆ ಕಳೆದ ಆವೃತ್ತಿಯನ್ನು ಟಿ20 ಸ್ವರೂಪದಲ್ಲಿ ಆಡಲಾಗಿತ್ತು. ಹಾಲಿ ಚಾಂಪಿಯನ್ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಆತಿಥೇಯ ಬಾಂಗ್ಲಾದೇಶಗಳು ಪಂದ್ಯಾವಳಿಗೆ ನೇರ ಪ್ರವೇಶವನ್ನು ಪಡೆದಿದ್ದು, 6ನೇ ತಂಡವಾಗಿ ನೇಪಾಳವೂ ಎಂಟ್ರಿಕೊಟ್ಟಿದೆ.
ನೇಪಾಳ ಕ್ರಿಕೆಟ್ ಇತಿಹಾಸದಲ್ಲಿ ತಂಡವು ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಇದು ಕೇವಲ ಎರಡನೇ ಬಾರಿ. ನೇಪಾಳವು 2023 ರಲ್ಲಿ ಏಷ್ಯಾಕಪ್‌ಗೆ ಪಾದಾರ್ಪಣೆ ಮಾಡಿತ್ತು. ಆ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ನೇಪಾಳ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಆದರೀಗ, 2027 ರಲ್ಲಿ ಪ್ರಮುಖ ತಂಡಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುವ ಉದ್ದೇಶದಿಂದ ನೇಪಾಳ ಮೈದಾನಕ್ಕೆ ಇಳಿಯಲಿದೆ.
ಅಜೇಯ ತಂಡವಾಗಿ ಏಷ್ಯಾಕಪ್ ಫೈನಲ್ಗೇರಿದ ಟೀಂ ಇಂಡಿಯಾ
ಈ ಪಂದ್ಯಾವಳಿಯನ್ನು ಆಗಸ್ಟ್ 30 ರಿಂದ ಸೆಪ್ಟೆಂಬರ್ 12 ರವರೆಗೆ 10 ಸಹವರ್ತಿ ರಾಷ್ಟ್ರಗಳಾದ ನೇಪಾಳ, ಯುಎಇ, ಮಲೇಷ್ಯಾ, ಕುವೈತ್, ಹಾಂಗ್ ಕಾಂಗ್, ಬಹ್ರೇನ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಸಿಂಗಾಪುರ ನಡುವೆ ನಡೆಸಲಾಯಿತು. ಅಂತಿಮವಾಗಿ ನೇಪಾಳ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.