ಏಕದಿನ ವಿಶ್ವಕಪ್ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ನೆದರ್ಲೆಂಡ್ಸ್ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 4 ರನ್ ಆಗುವಷ್ಟರಲ್ಲಿ ವಿಕ್ರಮಜಿತ್ ಸಿಂಗ್ (3) ಹಾಗೂ ಮ್ಯಾಕ್ಸ್ ಒಡೌಡ್ (0) ವಿಕೆಟ್ ಒಪ್ಪಿಸಿದರು.
ಆ ಬಳಿಕ ಕಣಕ್ಕಿಳಿದ ವೆಸ್ಲಿ ಬ್ಯಾರೆಸಿ 41 ರನ್ಗಳ ಕೊಡುಗೆ ನೀಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇನ್ನು ನಾಯಕ ಸ್ಕಾಟ್ ಎಡ್ವರ್ಡ್ಸ್ 89 ಎಸೆತಗಳಲ್ಲಿ 6 ಫೋರ್ಗಳೊಂದಿಗೆ 68 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ನೆದರ್ಲೆಂಡ್ಸ್ ತಂಡವು ನಿಗದಿತ 50 ಓವರ್ಗಳಲ್ಲಿ 229 ರನ್ ಕಲೆಹಾಕಿತು.
230 ರನ್ಗಳ ಸುಲಭ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ನೆದರ್ಲೆಂಡ್ಸ್ ಬೌಲರ್ಗಳು ಯಶಸ್ವಿಯಾದರು. ಅನುಭವಿ ಆರಂಭಿಕ ಆಟಗಾರ ಲಿಟ್ಟನ್ ದಾಸ್ 3 ರನ್ಗಳಿಸಿ ಔಟಾದರೆ, ತಂಝಿದ್ ಹಸನ್ 15 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.
ಆ ಬಳಿಕ ಬಂದ ನಜ್ಮುಲ್ ಹೊಸೈನ್ ಶಾಂಟೊ (9), ನಾಯಕ ಶಕೀಬ್ ಅಲ್ ಹಸನ್ (5) ಹಾಗೂ ಮುಶ್ಫಿಕುರ್ ರಹೀಮ್ (1) ಒಂದಂಕಿ ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಕೇವಲ 69 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ಮೆಹದಿ ಹಸನ್ ಮಿರಾಝ್ ಆಸರೆಯಾಗಿ ನಿಂತರು.
ಆದರೆ 40 ಎಸೆತಗಳಲ್ಲಿ 35 ರನ್ ಬಾರಿಸಿದ್ದ ಮೆಹಿದಿ ಹಸನ್ ಮಿರಾಝ್ ಅವರನ್ನು ಔಟ್ ಮಾಡುವಲ್ಲಿ ಕೊನೆಗೂ ಬಾಸ್ ಡಿ ಲೀಡೆ ಯಶಸ್ವಿಯಾದರು. ಇದರ ಬೆನ್ನಲ್ಲೇ ಮಹಮದುಲ್ಲಾ (20) ಕ್ಯಾಚ್ ನೀಡಿದರೆ, ಮೆಹದಿ ಹಸನ್ (17) ರನೌಟ್ ಆದರು.
ಅಂತಿಮವಾಗಿ 42.2 ಓವರ್ಗಳಲ್ಲಿ 142 ರನ್ಗಳಿಗೆ ಬಾಂಗ್ಲಾದೇಶ್ ತಂಡವು ಆಲೌಟ್ ಆಯಿತು.
ಈ ಮೂಲಕ ನೆದರ್ಲೆಂಡ್ಸ್ ತಂಡವು 87 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ 7.2 ಓವರ್ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದ ಪೌಲ್ ವ್ಯಾನ್ ಮೀಕೆರೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಬಾರಿಯ ವಿಶ್ವಕಪ್ನಲ್ಲಿ ಇದು ನೆದರ್ಲೆಂಡ್ಸ್ ತಂಡದ 2ನೇ ಜಯ. ಇದಕ್ಕೂ ಮುನ್ನ ಸೌತ್ ಆಫ್ರಿಕಾ ವಿರುದ್ಧ 38 ರನ್ಗಳ ಜಯ ಸಾಧಿಸಿತ್ತು. ಇದೀಗ ಬಾಂಗ್ಲಾದೇಶ್ ತಂಡವನ್ನು 87 ರನ್ಗಳಿಂದ ಬಗ್ಗು ಬಡಿಯುವ ಮೂಲಕ 2ನೇ ಬಾರಿ ಗೆಲುವಿನ ನಗೆ ಬೀರಿದೆ.
ಬಾಂಗ್ಲಾದೇಶ (ಪ್ಲೇಯಿಂಗ್ XI): ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಝ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.
ಇದನ್ನು ಓದಿ: ಸ್ಪೋಟಕ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಕನ್ನಡಿಗ ರಚಿನ್ ರವೀಂದ್ರ
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.