ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಇತ್ತ ಬಹುತೇಕ ತಂಡಗಳು ಸಿದ್ಧೆತಗಳಲ್ಲಿ ತೊಡಗಿಸಿಕೊಂಡಿದ್ದರೆ, ಅತ್ತ ಅಕ್ಟೋಬರ್ 5 ರಂದು ಮೊದಲ ಪಂದ್ಯವಾಡಬೇಕಿರುವ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಅಹಮದಾಬಾದ್ಗೆ ಬಂದಿಳಿದಿದೆ. ಇನ್ನು ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವಾಡಲಿರುವುದು ಅಕ್ಟೋಬರ್ 8 ರಂದು. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತದ ಎದುರಾಳಿ ಆಸ್ಟ್ರೇಲಿಯಾ. ಅಂದರೆ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾಗೆ ಕಠಿಣ ಸವಾಲು ಎದುರಾಗುವುದು ಖಚಿತ.
ಏಕೆಂದರೆ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 12 ಪಂದ್ಯಗಳನ್ನಾಡಿದೆ. ಈ ವೇಳೆ 8 ಮ್ಯಾಚ್ಗಳಲ್ಲಿ ಆಸೀಸ್ ಪಡೆ ಗೆದ್ದಿದೆ. ಇದಾಗ್ಯೂ 2011 ರಲ್ಲಿ, 2019 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಹೀಗಾಗಿ ಭಾರತದ ಗೆಲುವನ್ನು ನಿರೀಕ್ಷಿಸಬಹುದು.
ಆದರೆ ಮತ್ತೊಂದೆಡೆ ಟೀಮ್ ಇಂಡಿಯಾ ಅಕ್ಟೋಬರ್ 22 ರಂದು ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಇಲ್ಲಿ ಆಸ್ಟ್ರೇಲಿಯಾಗಿಂತ ಭಾರತದ ಪಾಲಿಗೆ ನ್ಯೂಝಿಲೆಂಡ್ ಡೇಂಜರಸ್ ಎನ್ನಬಹುದು. ಏಕೆಂದರೆ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ಪಡೆ ವಿರುದ್ಧ ಟೀಮ್ ಇಂಡಿಯಾ ಗೆದ್ದು 20 ವರ್ಷಗಳೇ ಕಳೆದಿವೆ.
ಅಂದರೆ ಭಾರತ ತಂಡ ಕೊನೆಯ ಬಾರಿಗೆ ನ್ಯೂಝಿಲೆಂಡ್ ವಿರುದ್ಧ ಗೆದ್ದಿರುವುದು 2003 ರಲ್ಲಿ. ಇದಾದ ಬಳಿಕ ನಡೆದ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತದ ವಿರುದ್ಧ ನ್ಯೂಝಿಲೆಂಡ್ ಮೇಲುಗೈ ಸಾಧಿಸುತ್ತಾ ಬಂದಿದೆ.
ಇದೀಗ 2023 ರ ವಿಶ್ವಕಪ್ನಲ್ಲಿ ಉಭಯ ತಂಡಗಳು ಅಕ್ಟೋಬರ್ 22 ರಂದು ಮುಖಾಮುಖಿಯಾಗಲಿದೆ. ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ದೀರ್ಘಕಾಲದ ತನ್ನ ಸೋಲಿನ ಸರಪಳಿ ಕಳಚಿಕೊಳ್ಳಲಿದೆಯಾ ಕಾದು ನೋಡಬೇಕಿದೆ.