ಟೀಮ್ ಇಂಡಿಯಾ ಪ್ಲ್ಯಾನ್​ಗಳು ಮಳೆಗೆ ಅಹುತಿ

ODI World Cup 2023: ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಎದುರಿಸಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಟೀಮ್ ಇಂಡಿಯಾ ಪ್ಲ್ಯಾನ್​ಗಳು ಮಳೆಗೆ ಅಹುತಿ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 03, 2023 | 5:27 PM

ICC World Cup 2023: ಏಕದಿನ ವಿಶ್ವಕಪ್​ ಆರಂಭಕ್ಕೂ ಮುನ್ನ ಭರ್ಜರಿ ತಯಾರಿಯ ನಿರೀಕ್ಷೆಯಲ್ಲಿದ್ದ ಟೀಮ್ ಇಂಡಿಯಾಗೆ ನಿರಾಸೆಯಾಗಿದೆ. ಏಕೆಂದರೆ ಮಂಗಳವಾರ ನಡೆಯಬೇಕಿದ್ದ ನೆದರ್​ಲೆಂಡ್ಸ್ ವಿರುದ್ಧದ ಅಭ್ಯಾಸ ಪಂದ್ಯ ಕೂಡ ಮಳೆಯ ಕಾರಣ ರದ್ದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾಗಿತ್ತು.

ಇದೀಗ ದ್ವಿತೀಯ ಅಭ್ಯಾಸ ಪಂದ್ಯ ಕೂಡ ರದ್ದಾಗಿರುವ ಕಾರಣ ಟೀಮ್ ಇಂಡಿಯಾ ನೇರವಾಗಿ ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ಯಾವುದೇ ಪಂದ್ಯವಾಡಿಲ್ಲ ಎಂಬುದು. ಅಂದರೆ ಭಾರತೀಯ ಆಟಗಾರರು ಎರಡು ವಾರಗಳ ಬಳಿಕ ಮತ್ತೆ ಕಣಕ್ಕಿಳಿಯಲಿದ್ದಾರೆ. ಇದು ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯನ್ನುಂಟು ಮಾಡಬಹುದು.

ಏಕೆಂದರೆ ಎಲ್ಲಾ ತಂಡಗಳು ಒಂದು ಅಭ್ಯಾಸ ಪಂದ್ಯಗಳನ್ನಾದರೂ ಆಡಿದ್ದಾರೆ. ಆದರೆ ಭಾರತದ 2 ಪಂದ್ಯಗಳೂ ಕೂಡ ಮಳೆಯಿಂದಾಗಿ ರದ್ದಾಗಿದೆ. ಸಾಮಾನ್ಯವಾಗಿ ಅಭ್ಯಾಸ ಪಂದ್ಯಗಳಲ್ಲಿನ ಪ್ರದರ್ಶನವನ್ನು ಆಧರಿಸಿ ಪ್ಲೇಯಿಂಗ್ ಇಲೆವೆನ್ ರೂಪಿಸಲಾಗುತ್ತದೆ.

ಟೀಮ್ ಇಂಡಿಯಾ ಕೂಡ ಇಂತಹದ್ದೇ ಪ್ಲ್ಯಾನ್​ನಲ್ಲಿತ್ತು. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದ ಬಳಿಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸುವ ಯೋಜನೆಯಲ್ಲಿದ್ದರು. ಆದರೆ ಟೀಮ್ ಇಂಡಿಯಾ ಈ ಎಲ್ಲಾ ಪ್ಲ್ಯಾನ್​ಗಳಿಗೆ ವರುಣ ಅಡ್ಡಿಯಾಗಿದ್ದಾನೆ.

ಇದಾಗ್ಯೂ ಈ ಬಾರಿ ಭಾರತದಲ್ಲೇ ವಿಶ್ವಕಪ್ ನಡೆಯುತ್ತಿರುವುದರಿಂದ ಇಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುವುದು ಟೀಮ್ ಇಂಡಿಯಾ ಆಟಗಾರರಿಗೆ ಕಷ್ಟವಾಗುವುದಿಲ್ಲ ಎನ್ನಬಹುದು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದ ಮೂಲಕ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.