ಏಕದಿನ ವಿಶ್ವಕಪ್ನ ರಣರೋಚಕ ನಾಕೌಟ್ ಪಂದ್ಯಕ್ಕಾಗಿ ಕ್ಷಣಗಣನೆ ಶುರುವಾಗಿದೆ. ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ. ಇತ್ತ 2011 ರ ಬಳಿಕ ಫೈನಲ್ಗೇರದ ಟೀಮ್ ಇಂಡಿಯಾ ಅಂತಿಮ ಘಟ್ಟಕ್ಕೆ ತಲುಪುವ ವಿಶ್ವಾಸದಲ್ಲಿದೆ.
ಅತ್ತ ಕಳೆದ ಬಾರಿಯ ರನ್ನರ್ ನ್ಯೂಝಿಲೆಂಡ್ ಕೂಡ ಮತ್ತೊಮ್ಮೆ ಫೈನಲ್ಗೇರುವ ತುಟಿತದಲ್ಲಿದೆ. ಹೀಗಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ನ್ಯೂಝಿಲೆಂಡ್ ತಂಡವು ಸೆಮಿಫೈನಲ್ನಲ್ಲಿ ಮುಗ್ಗರಿಸುವ ಹಣೆಪಟ್ಟಿ ಹೊಂದಿರುವುದು.
ಅಂದರೆ ಐಸಿಸಿ ಟೂರ್ನಿಗಳಲ್ಲಿ 12 ಬಾರಿ ಸೆಮಿಫೈನಲ್ಗೇರಿರುವ ಕಿವೀಸ್ ಪಡೆ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಇನ್ನುಳಿದ 9 ನಾಕೌಟ್ ಪಂದ್ಯಗಳಲ್ಲಿ ಮಕಾಡೆ ಮಲಗಿದೆ. ಆದರೆ ಟೀಮ್ ಇಂಡಿಯಾ ವಿರುದ್ಧ ಆಡಿದ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಜಯ ಸಾಧಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. 2019 ರಲ್ಲಿ ವಿಶ್ವಕಪ್ ವಿಜೇತರಾಗುವ ಫೇವರೇಟ್ ಎನಿಸಿಕೊಂಡಿದ್ದ ಟೀಮ್ ಇಂಡಿಯಾವನ್ನು ಸೆಮಿಫೈನಲ್ನಲ್ಲಿ ಕಿವೀಸ್ ಪಡೆ ಸೋಲಿಸಿತ್ತು. ಅಷ್ಟೇ ಅಲ್ಲದೆ ಐಸಿಸಿ ಟೂರ್ನಿಗಳಲ್ಲಿ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ.
ಇದೀಗ 4 ವರ್ಷಗಳ ಬಳಿಕ ಮತ್ತೆ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುತ್ತಿದೆ. ಅತ್ತ ಕಳೆದ ಬಾರಿ ಭಾರತಕ್ಕೆ ಸೋಲುಣಿಸಿದ ಆತ್ಮ ವಿಶ್ವಾಸದಲ್ಲಿ ನ್ಯೂಝಿಲೆಂಡ್ ಕಣಕ್ಕಿಳಿಯಲಿದೆ. ಇತ್ತ ಕಳೆದ ಬಾರಿಯ ಸೆಮಿಫೈನಲ್ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಉತ್ತಮ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಅದರಂತೆ 4 ವರ್ಷಗಳ ಹಳೆಯ ಸೋಲಿನ ಸೇಡನ್ನು ತೀರಿಸಿ ಭಾರತ ಲೆಕ್ಕ ಚುಕ್ತಾ ಮಾಡಲಿದೆಯಾ ಕಾದು ನೋಡಬೇಕಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮುಂದಿದೆ ಮೂರು ವಿಶ್ವ ದಾಖಲೆಗಳು
Published On - 10:29 pm, Mon, 13 November 23