ಪೂರನ್ ಪವರ್: ಬರೋಬ್ಬರಿ 113 ಮೀಟರ್ ಸಿಕ್ಸ್ ಸಿಡಿಸಿದ ನಿಕ್ಕಿ
The Hundred: ದಿ ಹಂಡ್ರೆಡ್ ಲೀಗ್ನಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ನಿಕೋಲಸ್ ಪೂರನ್ 113 ಮೀಟರ್ ಸಿಕ್ಸ್ ಸಿಡಿಸುವ ಮೂಲಕ ಮಿಂಚಿದ್ದಾರೆ. ಸ್ಕಾಟ್ ಕ್ಯೂರಿ ಎಸೆತದಲ್ಲಿ ಮೂಡಿಬಂದಿರುವ ಈ ಸಿಕ್ಸ್ ಮೈದಾನದ ಹೊರಗೆ ಹೋಗಿ ಬಿದ್ದಿರುವುದು ವಿಶೇಷ. ಇದೀಗ ಈ ಭರ್ಜರಿ ಸಿಕ್ಸ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೂರನ್ ಪವರ್ಗೆ ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ ಟೂರ್ನಿಯಲ್ಲಿ ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಟೂರ್ನಿಯ 27ನೇ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ vs ನಾರ್ಥನ್ ಸೂಪರ್‌ಚಾರ್ಜರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಬ್ಬರಿಸಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಸಾಲ್ಟ್ 4 ಭರ್ಜರಿ ಸಿಕ್ಸ್ಗಳನ್ನು ಒಳಗೊಂಡಂತೆ 61 ರನ್ ಸಿಡಿಸಿದರು. ಈ ಅರ್ಧಶತಕದ ನೆರವಿನಿಂದ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವು 100 ಎಸೆತಗಳಲ್ಲಿ 7 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ನಾರ್ಥನ್ ಸೂಪರ್‌ಚಾರ್ಜರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಪರಾಕ್ರಮ ಮೆರೆಯುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅದರಲ್ಲೂ ಸ್ಕಾಟ್ ಕ್ಯೂರಿ ಎಸೆದ 74ನೇ ಎಸೆತದಲ್ಲಿ ಪೂರನ್ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದರು. ಅದು ಸಹ 113 ಮೀಟರ್ನ ಸಿಕ್ಸ್ ಎಂಬುದು ವಿಶೇಷ. ಇದೀಗ ಈ ಭರ್ಜರಿ ಸಿಕ್ಸರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಪಂದ್ಯದಲ್ಲಿ ಕೇವಲ 33 ಎಸೆತಗಳನ್ನು ಎದುರಿಸಿದ ಪೂರನ್ 8 ಭರ್ಜರಿ ಸಿಕ್ಸ್ನೊಂದಿಗೆ ಅಜೇಯ 66 ರನ್ ಬಾರಿಸಿದರು. ಈ ಮೂಲಕ 97 ಎಸೆತಗಳಲ್ಲಿ ನಾರ್ಥನ್ ಸೂಪರ್‌ಚಾರ್ಜರ್ಸ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.