AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೊಚ್ಚಲ ಸರಣಿಯಲ್ಲೇ ವಿಶ್ವ ದಾಖಲೆ ಸೃಷ್ಟಿಸಿದ ಕನ್ನಡತಿ ನಿಕಿ ಪ್ರಸಾದ್..!

ಭಾರತ-ಜಿಂಬಾಬ್ವೆ ಟಿ20 ಸರಣಿಯಲ್ಲಿ ಕನ್ನಡತಿ ನಿಕಿ ಪ್ರಸಾದ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಮೊದಲ ಪಂದ್ಯದಲ್ಲಿ 39 ರನ್ ಗಳಿಸಿದ ಅವರು, ಎರಡನೇ ಪಂದ್ಯದಲ್ಲಿ ತಮ್ಮ ಟಿ20 ವೃತ್ತಿಜೀವನದ ಮೊದಲ 2 ಎಸೆತಗಳಲ್ಲೇ 2 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ಮೊದಲ ಎಸೆತಕ್ಕೆ ವಿಕೆಟ್ ಪಡೆದ ಭಾರತದ ಮೊದಲ ಮಹಿಳಾ ಆಟಗಾರ್ತಿ, ಹಾಗೂ ಮೊದಲ ಎರಡು ಎಸೆತಗಳಿಗೆ ಎರಡು ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚೊಚ್ಚಲ ಸರಣಿಯಲ್ಲೇ ವಿಶ್ವ ದಾಖಲೆ ಸೃಷ್ಟಿಸಿದ ಕನ್ನಡತಿ ನಿಕಿ ಪ್ರಸಾದ್..!
ನಿಕಿ ಪ್ರಸಾದ್
ಪೃಥ್ವಿಶಂಕರ
|

Updated on: Oct 18, 2026 | 10:49 PM

Share

ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಎರಡು ಪಂದ್ಯದಲ್ಲಿ ಭಾರತ ತಂಡ ಏಕಪಕ್ಷೀಯ ಗೆಲುವು ದಾಖಲಿಸಿ ಸರಣಿ ಕೈವಶ ಮಾಡಿಕೊಂಡಿದೆ. ಈ ಸರಣಿಯಲ್ಲಿ ಕನ್ನಡತಿ ನಿಕಿ ಪ್ರಸಾದ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೊದಲ ಸರಣಿಯಲ್ಲೇ ತಮ್ಮ ಪ್ರತಿಭೆ ತೋರಿರುವ ನಿಕ್ಕಿ ಪ್ರಸಾದ್‌, ಮೊದಲ ಪಂದ್ಯದಲ್ಲಿ ತಂಡ ಗುರಿ ಬೆನ್ನಟ್ಟುವ ವೇಳೆ 39 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ನಿಕ್ಕಿ ತಮ್ಮ ಮೊದಲ ಓವರ್‌ನ ಆರಂಭಿಕ ಎರಡು ಎಸೆತಗಳಲ್ಲೇ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಸತತ ಎರಡು ವಿಕೆಟ್

ಮೊದಲ ಪಂದ್ಯದಲ್ಲಿ ನಿಕಿ ಪ್ರಸಾದ್ ಅವರು ದೀಪ್ತಿ ಶರ್ಮಾ ಅವರೊಂದಿಗೆ ಮಹತ್ವದ ಜೊತೆಯಾಟವಾಡಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಪಂದ್ಯದಲ್ಲಿ ಅವರು 39 ರನ್ ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ಅವರಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಎರಡನೇ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ ಅವರು ನಿಕಿ ಪ್ರಸಾದ್‌ಗೆ ಬೌಲಿಂಗ್ ಮಾಡುವ ಜವಾಬ್ದಾರಿ ನೀಡಿದರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡ ನಿಕಿ, ಕೇವಲ ಒಂದು ರನ್ ನೀಡಿ ಆರಂಭಿಕ ಎರಡು ಎಸೆತಗಳಲ್ಲೇ ಜಿಂಬಾಬ್ವೆ ತಂಡಕ್ಕೆ ಎರಡು ದೊಡ್ಡ ಆಘಾತ ನೀಡಿದರು.

ನಿಕಿ ಪ್ರಸಾದ್ ವಿಶ್ವ ದಾಖಲೆ

ಈ ಓವರ್‌ನ ಮೊದಲ ಎಸೆತದಲ್ಲೇ ಮುಗೆರಿಯನ್ನು ನಿಕಿ ಪ್ರಸಾದ್ ಪೆವಿಲಿಯನ್‌ಗೆ ಕಳುಹಿಸಿದರು. ಈ ವಿಕೆಟ್ ಪಡೆಯುವ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು. ಇದಾದ ಬಳಿಕ ಮುಂದಿನ ಎಸೆತದಲ್ಲೇ ನ್ಯಾಶಾ ಗ್ವಾಂಜುರಾ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಈ ಮೂಲಕ ತಮ್ಮ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಎರಡು ಎಸೆತಗಳಲ್ಲೇ ಸತತ ಎರಡು ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳಾ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಯಾವುದೇ ಮಹಿಳಾ ಬೌಲರ್ ಇಂತಹ ಸಾಧನೆ ಮಾಡಿರಲಿಲ್ಲ.

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಸರಣಿ ಕೈವಶ ಮಾಡಿಕೊಂಡ ಸ್ಮೃತಿ ಪಡೆ

ಸತತ ಎರಡು ವಿಕೆಟ್ ಪಡೆದ ಬಳಿಕ ನಿಕಿ ಪ್ರಸಾದ್‌ಗೆ ಹ್ಯಾಟ್ರಿಕ್ ಸಾಧಿಸುವ ಸುವರ್ಣಾವಕಾಶವೂ ಇತ್ತು. ಅವರ ಎಸೆತ ಬ್ಯಾಟರ್‌ನ ಪ್ಯಾಡ್‌ಗೆ ಬಡಿದಿತ್ತು. ಆದರೆ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಹೋಗುತ್ತಿದ್ದ ಕಾರಣ ಅಂಪೈರ್ ನಾಟೌಟ್ ನೀಡಿದರು. ಹೀಗಾಗಿ ಅವರ ಐತಿಹಾಸಿಕ ಹ್ಯಾಟ್ರಿಕ್ ಸಾಧನೆ ಸ್ವಲ್ಪದರಲ್ಲೇ ತಪ್ಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More