T20 World Cup 2025: ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ; ಕನ್ನಡತಿ ನಿಕ್ಕಿ ಪ್ರಸಾದ್​ಗೆ ನಾಯಕತ್ವ

|

Updated on: Dec 24, 2024 | 3:21 PM

India's U19 Women's T20 World Cup Squad Announced: ಮಲೇಷ್ಯಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ಮಹಿಳಾ ತಂಡವನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ ನಿಕ್ಕಿ ಪ್ರಸಾದ್ ತಂಡದ ನಾಯಕಿಯಾಗಿದ್ದಾರೆ. ಏಷ್ಯಾಕಪ್‌ನಲ್ಲಿ ಚಾಂಪಿಯನ್‌ ಆಗಿದ್ದ ಭಾರತ ತಂಡವು ಈ ಬಾರಿಯ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಜನವರಿ 18 ರಿಂದ ಫೆಬ್ರವರಿ 2 ರವರೆಗೆ ನಡೆಯುವ ಈ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ.

T20 World Cup 2025: ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ; ಕನ್ನಡತಿ ನಿಕ್ಕಿ ಪ್ರಸಾದ್​ಗೆ ನಾಯಕತ್ವ
ಭಾರತ ವನಿತಾ ಪಡೆ
Follow us on

ಮುಂದಿನ ವರ್ಷ ಮಲೇಷ್ಯಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್​ಗೆ 15 ಸದಸ್ಯರ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಇತ್ತೀಚಿಗಷ್ಟೇ ನಡೆದಿದ್ದ 19 ವರ್ಷದೊಳಗಿನವರ ಮಹಿಳಾ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ಕನ್ನಡತಿ ನಿಕ್ಕಿ ಪ್ರಸಾದ್ ಟಿ20 ವಿಶ್ವಕಪ್‌ನಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ 19 ವರ್ಷದೊಳಗಿನವರ ಏಷ್ಯಾಕಪ್‌ ತಂಡದಲ್ಲಿದ್ದ ಭಾಗಶಃ ಆಟಗಾರರೇ ಟಿ20 ವಿಶ್ವಕಪ್​ಗೂ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಸೇರಿದಂತೆ 16 ತಂಡಗಳು ಭಾಗವಹಿಸಲಿವೆ. ಮುಂದಿನ ವರ್ಷ ನಡೆಯಲ್ಲಿರುವ ಈ ಟೂರ್ನಿ ಜನವರಿ 18 ರಿಂದ ಆರಂಭವಾಗಿ ಫೆಬ್ರವರಿ 2 ರಂದು ಕೊನೆಗೊಳ್ಳಲಿದೆ.

ಕನ್ನಡತಿ ನಿಕ್ಕಿ ಪ್ರಸಾದ್ ನಾಯಕಿ

ಮೇಲೆ ಹೇಳಿದಂತೆ ಮುಂದಿನ ವರ್ಷ ನಡೆಯಲಿರುವ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಕರ್ನಾಟಕದ ನಿಕ್ಕಿ ಪ್ರಸಾದ್ ತಂಡದ ಸಾರಥ್ಯ ವಹಿಸಲಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಭಾರತ ಎ ವಿರುದ್ಧ ನಡೆದ ಅಂಡರ್-19 ಮಹಿಳಾ ಪಂದ್ಯದಲ್ಲಿ ನಿಕ್ಕಿ ಭಾರತ ಬಿ ತಂಡದ ನಾಯಕತ್ವ ವಹಿಸಿದ್ದರು. ಇದಲ್ಲದೆ 19 ವರ್ಷದೊಳಗಿನವರ ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ನಿಕ್ಕಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 41 ರನ್​ಗಳಿಂದ ಮಣಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರೆಸಿದ್ದರು.

ಭಾರತ ಹಾಲಿ ಚಾಂಪಿಯನ್

ಭಾರತ ತಂಡ ಟೂರ್ನಿಯ ಹಾಲಿ ಚಾಂಪಿಯನ್ ಆಗಿದೆ. ಕಳೆದ ಬಾರಿ ಅಂದರೆ 2023 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 19 ವರ್ಷದೊಳಗಿನವರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಭಾರತ ವನಿತಾ ಪಡೆ ವಿಶ್ವಕಪ್ ಗೆದ್ದುಕೊಂಡಿತ್ತು. ಇನ್ನು ಕಳೆದ ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದ ಆಟಗಾರ್ತಿಯರ ಪೈಕಿ ಕೆಲವರು ಈ ಬಾರಿಯ ವಿಶ್ವಕಪ್​ಗೂ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಅವರುಗಳಲ್ಲಿ ಜಿ. ತ್ರಿಷಾ, ಎಂಡಿ ಶಬ್ನಮ್ ಮತ್ತು ಸೋನಮ್ ಯಾದವ್ ಸೇರಿದ್ದಾರೆ.

ಭಾರತದ ಮೊದಲ ಎದುರಾಳಿ ಯಾರು?

19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, ತಲಾ 4 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಭಾರತ ಎ ಗುಂಪಿನಲ್ಲಿದ್ದು ಈ ಗುಂಪಿನಲ್ಲಿ ಭಾರತವನ್ನು ಹೊರತುಪಡಿಸಿ, ಆತಿಥೇಯ ಮಲೇಷ್ಯಾ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳಿವೆ. ಭಾರತ ತಂಡ ಜನವರಿ 19 ರಂದು ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಎಲ್ಲಾ ಗುಂಪು ಹಂತದ ಪಂದ್ಯಗಳು ಕೌಲಾಲಂಪುರದಲ್ಲಿ ನಡೆಯಲಿದ್ದು ಭಾರತ ಇರುವ ಗುಂಪನ್ನು ನೋಡಿದರೆ ಅದು ಮುಂದಿನ ಸುತ್ತಿಗೆ ಹೋಗುವುದು ಖಚಿತ ಎನಿಸುತ್ತಿದೆ.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ: ನಿಕ್ಕಿ ಪ್ರಸಾದ್ (ನಾಯಕಿ), ಸಾನಿಕಾ ಚಲ್ಕೆ (ಉಪನಾಯಕಿ), ಜಿ. ತ್ರಿಶಾ, ಕಮಲಿನಿ ಜಿ (ವಿಕೆಟ್ ಕೀಪರ್), ಭಾವಿಕಾ ಅಹಿರೆ (ವಿಕೆಟ್ ಕೀಪರ್), ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ವಿಜೆ ಜೋಶಿತಾ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಆನಂದಿತ್ ಕಿಶೋರ್, ಎಂಡಿ ಶಬ್ನಮ್, ಎಸ್. ವೈಷ್ಣವಿ.

ಸ್ಟ್ಯಾಂಡ್‌ಬೈ: ನಂಧನ ಎಸ್, ಇರಾ ಜೆ, ಅನಾದಿ ಟಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Tue, 24 December 24