ಎಂಎಸ್ ಧೋನಿ (MS Dhoni) ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು ಆದರೆ ಅಭಿಮಾನಿಗಳ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ. ಆಗಸ್ಟ್ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ಹೊರತಾಗಿಯೂ, ಮಾಜಿ ಭಾರತ ನಾಯಕ ಎಂಎಸ್ ಧೋನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರೀಡೆಯ ಮೇಲಿನ ಪ್ರೀತಿಯ ಹೊರತಾಗಿ, ಧೋನಿಗೆ ದುಬಾರಿ ಬೆಲೆಯ ಕಾರು, ಬೈಕ್‌ಗಳ ಮೇಲೆ ಹೆಚ್ಚು ವ್ಯಾಮೋಹ. ಹೀಗಾಗಿಯೇ ಧೋನಿ ತಮ್ಮ ಗ್ಯಾರೆಜ್ನಲ್ಲಿ ದುಬಾರಿ ವಾಹನಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಆದಾಗ್ಯೂ, ಇದೇ ಬುಧವಾರ, ಧೋನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದು ಸಖತ್ ಟ್ರೆಂಡ್ ಕ್ರಿಯೆಟ್ ಮಾಡಿದೆ. ಇಷ್ಟು ದಿನ ದುಬಾರಿ ಕಾರು, ಬೈಕ್‌ಗಳ ಮೇಲೆ ಸವಾರಿ ಮಾಡಿ ಸುದ್ದಿಯಾಗುತ್ತಿದ್ದ ಧೋನಿ, ಟ್ರ್ಯಾಕ್ಟರ್ ಹತ್ತಿ ಹೊಲು ಉಳುಮೆ ಮಾಡುವ ಕಾಯಕಕ್ಕೆ ಮುಂದಾಗಿದ್ದಾರೆ. ಕೃಷಿಕ ಧೋನಿಯನ್ನು ಕಂಡ ಅನೇಕ ಅಭಿಮಾನಿಗಳು ಭಿನ್ನ ವಿಭಿನ್ನ ಕಾಮೆಂಟ್ಗಳ ಮೂಲಕ ತನ್ನ ನೆಚ್ಚಿನ ಆಟಗಾರರನ್ನು ಕೊಂಡಾಡಿದ್ದಾರೆ. ಇವರ ಸಾಲಿನಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕೂಡ ಸೇರಿದ್ದು, ಧೋನಿ ಹಂಚಿಕೊಂಡ ವಿಡಿಯೋಗೆ ಜಡೇಜಾ ಮಾಡಿರುವ ಕಾಮೆಂಟ್ ಇದೀಗ ಸಖತ್ ವೈರಲ್ ಆಗುತ್ತಿದೆ.
ಇತ್ತಿಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಇನ್ಸ್ಟಾಗ್ರಾಮ್ನಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿರುವ ಧೋನಿ, “ಹೊಸದನ್ನು ಕಲಿಯಲು ಸಂತೋಷವಾಗಿದೆ. ಆದರೆ ಕೆಲಸವನ್ನು ಮುಗಿಸಲು ತುಂಬಾ ಸಮಯ ತೆಗೆದುಕೊಂಡಿತು.” ಎಂಬ ಕ್ಯಾಪ್ಶನ್ ಕೂಡ ನೀಡಿದ್ದರು.
ವಾಸ್ತವವಾಗಿ ಹೇಳಬೇಕೆಂದರೆ ಇದು ಸುಮಾರು ಎರಡು ವರ್ಷಗಳ ನಂತರ ಧೋನಿಯ ಮೊದಲ ಇನ್‌ಸ್ಟಾಗ್ರಾಮ್ ಪೋಸ್ಟ್ ಆಗಿದೆ. ಹೀಗಾಗಿ ಧೋನಿಯ ಪೋಸ್ಟ್ ಕಂಡ ಸಾವಿರಾರು ಅಭಿಮಾನಿಗಳು ಈ ಪೋಸ್ಟ್ಗೆ ವಿಭಿನ್ನ ಕಾಮೆಂಟ್ಗಳನ್ನು ಮಾಡಿದ್ದಾರೆ. ಅಭಿಮಾನಿಗಳ ಜೊತೆಗೆ ಧೋನಿಯ ಈ ವಿಡಿಯೋಗೆ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ‘ನಂಬರ್ ಪ್ಲೇಟ್ ಇಲ್ಲ’ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇದೀಗ ಜಡೇಜಾ ಮಾಡಿರುವ ಈ ಕಾಮೆಂಟ್ ಬರೋಬ್ಬರಿ 23,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.
ಆಗಸ್ಟ್ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಧೋನಿ, ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ತನ್ನ ನಾಯಕತ್ವದಲ್ಲಿ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಮಹಿಗೆ ಇದು ಕೊನೆಯ ಐಪಿಎಲ್ ಅಂತಲೇ ಹೇಳಲಾಗುತ್ತಿದೆ. ಹೀಗಾಗಿ ತಂಡವನ್ನು ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ನಡೆಸಿದ ಧೋನಿಗೆ ಫೈನಲ್ ಗೆಲುವಿನೊಂದಿಗೆ ವಿದಾಯ ಹೇಳಲು ಫ್ರಾಂಚೈಸಿ ಪ್ರಯತ್ನಿಸುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Fri, 10 February 23