ಒಂದೇ ಓವರ್‌ನಲ್ಲಿ ಐದು ವಿಕೆಟ್ ಉರುಳಿಸಿದ್ದ ವೇಗಿಗೆ ಟೀಂ ಇಂಡಿಯಾ ವಿರುದ್ಧ ಅವಕಾಶ..!
ಭಾರತ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡ ಪ್ರಕಟವಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ 5 ಎಸೆತಗಳಲ್ಲಿ 5 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದ ಬ್ರೆಟ್ ರಾಂಡೆಲ್‌ಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗಿದೆ. ಜೊತೆಗೆ ಜೋಶ್ ಕ್ಲಾರ್ಕ್‌ಸನ್ ಕೂಡ ತಂಡ ಸೇರಿದ್ದಾರೆ. ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ ಬದಲಿಗೆ ಇವರು ತಂಡಕ್ಕೆ ಬಂದಿದ್ದಾರೆ.

ಭಾರತ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ನಾಲ್ಕನೇ ಹಾಗೂ ಐದನೇ ಏಕದಿನ ಪಂದ್ಯಗಳ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವ ಕಿವೀಸ್ ಪಡೆ, ಒಂದೇ ಓವರ್‌ನಲ್ಲಿ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿ ವಿಶ್ವದ ಗಮನ ಸೆಳೆದಿದ್ದ ಬೌಲರ್‌ಗೆ ಮಣೆ ಹಾಕಿದೆ. 31 ವರ್ಷದ ವೇಗಿ ಬ್ರೆಟ್ ರಾಂಡೆಲ್ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಜೊತೆಗೆ ಐದನೇ ಏಕದಿನ ಪಂದ್ಯಕ್ಕಾಗಿ ಆಲ್‌ರೌಂಡರ್ ಜೋಶ್ ಕ್ಲಾರ್ಕ್‌ಸನ್ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಿಶೇಷವೆಂದರೆ, ರಾಂಡೆಲ್ ಮತ್ತು ಕ್ಲಾರ್ಕ್‌ಸನ್ ಇಬ್ಬರೂ ನ್ಯೂಜಿಲೆಂಡ್‌ನ ದೇಶೀಯ ಕ್ರಿಕೆಟ್‌ನಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.
ಬ್ರೆಟ್ ರಾಂಡೆಲ್‌ಗೆ ಅವಕಾಶ
ಬ್ರೆಟ್ ರಾಂಡೆಲ್ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಾಲ್ಕನೇ ಅಥವಾ ಐದನೇ ಏಕದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕರೆ, ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ದೊರೆಯಲಿದೆ. 31 ವರ್ಷದ ರಾಂಡೆಲ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಅನುಭವ ಹೊಂದಿದ್ದಾರೆ. ಪ್ರಥಮ ದರ್ಜೆ, ಲಿಸ್ಟ್ ಎ ಹಾಗೂ ಟಿ20 ಕ್ರಿಕೆಟ್ ಸೇರಿ ಒಟ್ಟು 143 ಪಂದ್ಯಗಳ ಅನುಭವ ಹೊಂದಿರುವ ಅವರು 284 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 55 ಪಂದ್ಯಗಳಿಂದ 100 ವಿಕೆಟ್ ಪಡೆದಿದ್ದಾರೆ.
5 ಎಸೆತಗಳಲ್ಲಿ 5 ವಿಕೆಟ್
ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡದ ವೇಗದ ಬೌಲರ್ ಬ್ರೆಟ್ ರಾಂಡೆಲ್ ಈ ವರ್ಷದ ಮಾರ್ಚ್‌ನಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ಸುದ್ದಿಯಾಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿದ ವಿಶ್ವದ ಏಕೈಕ ಬೌಲರ್ ಎಂಬ ವಿಶೇಷ ದಾಖಲೆಯನ್ನು ಅವರು ನಿರ್ಮಿಸಿದ್ದರು. ಪ್ಲಂಕೆಟ್ ಶೀಲ್ಡ್ ಟೂರ್ನಿಯಲ್ಲಿ ನಾರ್ದರ್ನ್ ಡಿಸ್ಟ್ರಿಕ್ಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಅಪರೂಪದ ಸಾಧನೆ ಮಾಡಿದ್ದರು. ಅವರ ಈ ಅದ್ಭುತ ಬೌಲಿಂಗ್ ಪ್ರದರ್ಶನ ಇದೀಗ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವಂತೆ ಮಾಡಿದೆ.
ಕಿವೀಸ್ ತಂಡದಲ್ಲಿ ಎರಡು ಬದಲಾವಣೆ
ನಾಲ್ಕನೇ ಮತ್ತು ಐದನೇ ಏಕದಿನ ಪಂದ್ಯಗಳ ನ್ಯೂಜಿಲೆಂಡ್ ತಂಡವನ್ನು ಗಮನಿಸಿದರೆ ಎರಡು ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ನಾಲ್ಕನೇ ಏಕದಿನ ಪಂದ್ಯಕ್ಕೆ ಕೈಲ್ ಜೇಮಿಸನ್ ಮತ್ತು ಮ್ಯಾಟ್ ಹೆನ್ರಿ ತಂಡದಲ್ಲಿದ್ದಾರೆ. ಆದರೆ ಐದನೇ ಪಂದ್ಯಕ್ಕೆ ಇವರ ಬದಲಿಗೆ ಬ್ಲೇರ್ ಟಿಕ್ನರ್ ಮತ್ತು ಜೋಶ್ ಕ್ಲಾರ್ಕ್‌ಸನ್ ಸ್ಥಾನ ಪಡೆದಿದ್ದಾರೆ. ಜೇಮಿಸನ್ ಮತ್ತು ಹೆನ್ರಿ ನಾಲ್ಕನೇ ಏಕದಿನ ಪಂದ್ಯದ ಬಳಿಕ ನ್ಯೂಜಿಲೆಂಡ್‌ನ ಮುಂಬರುವ ಟೆಸ್ಟ್ ಸರಣಿಯ ಸಿದ್ಧತೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ನವೆಂಬರ್ 19ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.
View this post on Instagram
ನಾಲ್ಕನೇ ಏಕದಿನ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಶರ್, ಡೀನ್ ಫಾಕ್ಸ್‌ಕ್ರಾಫ್ಟ್, ಮಿಚ್ ಹೇ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಬ್ರೆಟ್ ರಾಂಡೆಲ್, ಟಿಮ್ ಸೈಫರ್ಟ್, ವಿಲ್ ಯಂಗ್.
ಐದನೇ ಏಕದಿನ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಶರ್, ಡೀನ್ ಫಾಕ್ಸ್‌ಕ್ರಾಫ್ಟ್, ಮಿಚ್ ಹೇ, ಬ್ಲೇರ್ ಟಿಕ್ನರ್, ಜೋಶ್ ಕ್ಲಾರ್ಕ್‌ಸನ್, ನಿಕ್ ಕೆಲ್ಲಿ, ಬ್ರೆಟ್ ರಾಂಡೆಲ್, ಟಿಮ್ ಸೈಫರ್ಟ್, ವಿಲ್ ಯಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Thu, 12 November 26
