ಪ್ರಸ್ತುತ, ಕ್ರಿಕೆಟ್ ಜಗತ್ತಿನಲ್ಲಿ ಟಿ20 ವಿಶ್ವಕಪ್ (T20 World Cup 2022) ಹಬ್ಬ ಭರ್ಜರಿಯಾಗಿ ಶುರುವಾಗಿದೆ. ಈ ಚುಟುಕು ಸಮರದ ಆರಂಭಕ್ಕೆ ಇನ್ನೂ ಕೇಲವೇ ಗಂಟೆಗಳು ಬಾಕಿ ಇದ್ದು, ಈಗಾಗಲೇ ಎಲ್ಲಾ ತಂಡಗಳು ಕಾಂಗರೂ ನಾಡಿಗೆ ಕಾಲಿಟ್ಟಿವೆ. ಟೀಂ ಇಂಡಿಯಾ ಕೂಡ ಈಗಾಗಲೇ ಆಸೀಸ್ ನೆಲಕ್ಕೆ ಕಾಲಿಟ್ಟಿದೆ. ಆದರೆ ಇತ್ತೀಚೆಗೆ ಬಿಸಿಸಿಐನಲ್ಲಿನ (BCCI) ಆಂತರಿಕ ರಾಜಕೀಯ ಗೊಂದಲಗಳಿಂದಾಗಿ ಭಾರತ ಕ್ರಿಕೆಟ್ ತಲೆಬಗ್ಗಿಸುವ ಪರಿಸ್ಥಿತಿ ಎದುರಾಗಿದೆ. ವಾಸ್ತವವಾಗಿ, ಬಿಸಿಸಿಐ ಪಟ್ಟದಿಂದ ಸೌರವ್ ಗಂಗೂಲಿ ಕೆಳಗಿಳಿಯುವ ಮನಸ್ಸು ಮಾಡುತ್ತಿಲ್ಲ. ಇತ್ತ ಮಂಡಳಿಗೆ ಅವರನ್ನು ಮುಂದುವರೆಸಲು ಇಷ್ಟವಿಲ್ಲ. ಈ ಇಬ್ಬರ ನಡುವಿನ ಹಗ್ಗಜಗ್ಗಟಾದಲ್ಲಿ ಮತ್ತೊಂದು ಆಘಾತಕ್ಕಾರಿ ಸುದ್ದಿ ಬಿಸಿಸಿಐಗೆ ಬರಸಿಡಿಲಿನಂತೆ ಎದುರಾಗಿದೆ. ಅಷ್ಟಕ್ಕೂ ಈ ಸುದ್ದಿ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಸಂಬಂಧಪಟ್ಟಿದ್ದು, ಕೇಂದ್ರ ಸರ್ಕಾರ ತನ್ನ ಪಟ್ಟು ಬದಲಾಯಿಸದಿದ್ದರೆ, ಬಿಸಿಸಿಐ ಖಜಾನೆಗೆ ಬರೋಬ್ಬರಿ 955 ಕೋಟಿ ರೂ. ಕತ್ತರಿ ಬೀಳಲಿದೆ.
ಮುಂದಿನ ವರ್ಷ ನಡೆಯಲ್ಲಿರುವ ಏಕದಿನ ವಿಶ್ವಕಪ್ನ ಆತಿಥ್ಯವನ್ನು ಬಿಸಿಸಿಐ ವಹಿಸಿಕೊಂಡಿದೆ. 2023 ರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಲ್ಲಿರುವ ಕ್ರಿಕೆಟ್ನ ಮಹಾಕುಂಭಕ್ಕೆ ಬಿಸಿಸಿಐ ಸರ್ವ ತಯಾರಿ ಮಾಡಿಕೊಳ್ಳಲು ಮುಂದಾಗಿದೆ. ಈ ನಡುವೆ ಐಸಿಸಿ ವಿಧಿಸಿರುವ ಹಲವು ಷರತ್ತುಗಳು ಬಿಸಿಸಿಐಗೆ ತಲೆನೋವು ತಂದೊಡ್ಡಿದೆ. ಅದರಲ್ಲಿ ಪ್ರಮುಖವಾದದ್ದು ಎಂದರೆ ಅದು ತೆರಿಗೆ ವಿನಾಯಿತಿ. ಬಿಸಿಸಿಐಗೆ ವಿಶ್ವಕಪ್ ಆಯೋಜಿಸುವ ಹಕ್ಕು ನೀಡಿರುವ ಐಸಿಸಿ, ಈ ಕೀಡ್ರಾಕೂಟದಿಂದ ತನಗೆ ಬರುವ ಆದಾಯದಲ್ಲಿ ನಾವು ಭಾರತ ಸರ್ಕಾರಕ್ಕೆ ತೆರಿಗೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ. ಐಸಿಸಿಯ ಈ ನಿರ್ಧಾರ ಬಿಸಿಸಿಐಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸರಕಾರದಿಂದ ತೆರಿಗೆ ವಿನಾಯಿತಿ ಪಡೆದಿಲ್ಲ
ಐಸಿಸಿಯ ಈ ನಿರ್ಧಾರದ ಬಗ್ಗೆ ಬಿಸಿಸಿಐ ಈಗಾಗಲೇ ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿಗಾಗಿ ನಿರಂತರವಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರದ ಈ ನಡೆ ಇದೀಗ ಮಂಡಳಿಗೆ ದೊಡ್ಡ ಪೆಟ್ಟು ನೀಡಿದ್ದು, ಟೂರ್ನಿಯ ಪ್ರಸಾರದಿಂದ ಬರುವ ಆದಾಯದ ಮೇಲೆ ಶೇ.21.84ರಷ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಿಂದ ಬಿಸಿಸಿಐಗೆ ಕೋಟಿ ಕೋಟಿ ನಷ್ಟವಾಗಲಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಕೇಂದ್ರ ಸರ್ಕಾರ ತನ್ನ ನಿರ್ಧಾರಕ್ಕೆ ಅಂಟಿಕೊಂಡರೆ, ಕ್ರಿಕೆಟ್ ಲೋಕದ ಬಿಗ್ಬಾಸ್ ಸುಮಾರು 955 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಈಗ ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ಪಂದ್ಯಾವಳಿ ಆಯೋಜಿಸಬೇಕಾದರೆ ಈ ಟೂರ್ನಿಯಿಂದ ತನಗೆ ಬರುವ ಆದಾಯದಲ್ಲಿ ಬಿಸಿಸಿಐಯೇ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಈಗಾಗಲೇ ಸೂಚಿಸಿರುವಂತೆ ಐಸಿಸಿ ಯಾವುದೇ ಕಾರಣಕ್ಕೂ ತನ್ನ ಆದಾಯದಲ್ಲಿ ತೆರಿಗೆ ಕಟ್ಟಲು ಸಿದ್ದವಿಲ್ಲ ಎಂದು ಬಿಸಿಸಿಐಗೆ ತಿಳಿಸಿದೆ. ಹೀಗಾಗಿ ಭಾರತದಲ್ಲಿ ವಿಶ್ವಕಪ್ ಆಯೋಜಿಸಬೇಕೆಂದರೆ ಬಿಸಿಸಿಐಯೇ ತೆರಿಗೆ ಕಟ್ಟಬೇಕಾಗುತ್ತದೆ.
ಈ ಹಿಂದೆಯೂ ಕೂಡ ಬಿಸಿಸಿಐಯೇ ತನ್ನ ಆದಾಯದಿಂದ ತೆರಿಗೆ ಕಟ್ಟಿ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸತ್ತು. ಆದರೆ ಆ ಬಾರಿ ಬಿಸಿಸಿಐ ಕಟ್ಟಿದ ತೆರಿಗೆಗೂ ಈಗ ಕೇಂದ್ರ ಸರ್ಕಾರ ವಿದಿಸುತ್ತಿರುವ ತೆರಿಗೆಗೂ ಅಜಾಗಜಾಂತರ ವ್ಯತ್ಯಾಸವಿದೆ. ಇದಕ್ಕೂ ಮುನ್ನ 2016 ರಲ್ಲಿ ನಡೆದ ಟಿ20 ವಿಶ್ವಕಪ್ ಆತಿಥ್ಯದಲ್ಲಿ ಬಿಸಿಸಿಐ 193 ಕೋಟಿ ರೂಪಾಯಿಯನ್ನು ತೆರಿಗೆ ರೂಪದಲ್ಲಿ ಪಾವತಿಸಿತ್ತು. ಈ ವಿಚಾರವಾಗಿ ಬಿಸಿಸಿಐ ಈಗಲೂ ಐಸಿಸಿ ವಿರುದ್ಧ ಕಾನೂನು ಹೋರಾಟ ನಡೆಸುತ್ತಾ ಬಂದಿದೆ. ಹೀಗಾಗಿ ಭಾರತದ ತೆರಿಗೆ ಕಾನೂನುಗಳಲ್ಲಿ ತೆರಿಗೆ ವಿನಾಯಿತಿಗೆ ಯಾವುದೇ ಅವಕಾಶವಿಲ್ಲದಿರುವುದರಿಂದ ಈ ಬಾರಿಯೂ ಬಿಸಿಸಿಐಯೇ ಈ ಬಾರವನ್ನು ಹೊರಬೇಕಾಗುತ್ತದೆ.
ವರದಿಗಳ ಪ್ರಕಾರ ಭಾರತದಲ್ಲಿ ವಿಶ್ವಕಪ್ ಆಯೋಜಿಸುವುದರೊಂದಿಗೆ ಟೆಲಿವಿಷನ್ ಪ್ರಸಾರದಿಂದ ಹರಿದುಬರುವ ಆದಾಯದಲ್ಲಿ ಶೇ. 21.81 ರಷ್ಟು ಆದಾಯವನ್ನು ಸಚಾರ್ಜ್ ರೂಪದಲ್ಲಿ ಐಸಿಸಿ, ಭಾರತ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಹೀಗಾಗಿ ಈಗ ವಿದಿಸಿರುವ ತೆರಿಗೆ ಪ್ರಮಾಣವನ್ನು ಶೇ.10.92 ಕ್ಕೆ ಇಳಿಸಲು ಬಿಸಿಸಿಐ ಸತತ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ. ಒಂದು ವೇಳೆ ಈ ಪ್ರಯತ್ನದಲ್ಲಿ ಬಿಸಿಸಿಐ ಸಫಲವಾದರೆ, ಆಗ ಕೇವಲ 430 ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ.
ನಷ್ಟಕ್ಕೆ ಕಡಿವಾಣ ಹಾಕಲು ಬಿಸಿಸಿಐ ಯತ್ನ
ತೆರಿಗೆ ಕಡಿತಗೊಳಿಸುವ ಸಲುವಾಗಿ ಬಿಸಿಸಿಐ, ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಜೊತೆಗೆ ನಿರಂತರ ಚರ್ಚೆ ನಡೆಸುತ್ತಿದೆ ಎಂದು ವರದಿಯಾಗಿದೆ. ಶೇ. 20 ರಷ್ಟು ತೆರಿಗೆ ಅಧಿಕವಾಗಿದ್ದು, ಇದನ್ನು ಶೇ. 10 ಕ್ಕೆ ಇಳಿಸುವಂತೆ ಬಿಸಿಸಿಐ ಮನವಿ ಇಟ್ಟಿದೆ. ಈ ಬಗ್ಗೆ ಶೀಘ್ರವೇ ಸ್ಪಷ್ಟತೆ ಹೊರಬೀಳಲಿದ್ದು, ಒಂದು ವೇಳೆ ತೆರಿಗೆ ವಿನಾಯಿತಿ ಸಿಗದೇ ಇದ್ದರೆ ಟೂರ್ನಿ ಆಯೋಜನೆಯಿಂದ ಬರುವ ಆದಾಯದಲ್ಲಿ ಬಿಸಿಸಿಐ ಪಾಲಿಗೆ ನೀಡುವ ಲಾಭದಲ್ಲಿ ಐಸಿಸಿ ತಾನೂ ಪಾವಿತಿಸಿದ ತೆರಿಗೆ ಮೊತ್ತವನ್ನು ಕಡಿತಗೊಳಿಸಿ ಮಿಕ್ಕ ಹಣವನ್ನು ಬಿಸಿಸಿಐಗೆ ನೀಡಲಿದೆ. ಇದು ಬಿಸಿಸಿಐ ಖಜಾನೆಗೆ ಭಾರಿ ನಷ್ಟ ತಂದೊಡ್ಡುತ್ತದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
2016 ಮತ್ತು 2023ರ ನಡುವೆ ಐಸಿಸಿಯ ಆದಾಯ ಸಂಗ್ರಹದಲ್ಲಿ ಬಿಸಿಸಿಐ ಪಾಲು ಸುಮಾರು 3336 ಕೋಟಿ ರೂ. ಆಗಿದ್ದು, 2023ರಲ್ಲಿ ಭಾರತದಲ್ಲಿ ನಡೆಯಲಿರುವ ಈ ಟೂರ್ನಿಯ ಪ್ರಸಾರದಿಂದ ಐಸಿಸಿಗೆ 4400 ಕೋಟಿ ಆದಾಯ ಬರುವ ನಿರೀಕ್ಷೆಯಿದೆ.
Published On - 10:08 am, Sat, 15 October 22