ಆಸ್ಟ್ರೇಲಿಯಾದಲ್ಲಿ ನಡೆದ ಈ ಬಾರಿಯ ಟಿ20 ವಿಶ್ವಕಪ್ (T20 World Cup 2022 ) ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಹಲವು ಅಚ್ಚರಿಯ ಫಲಿತಾಂಶಗಳೊಂದಿಗೆ ಹಾಗೂ ತಿರುವುಗಳೊಂದಿಗೆ ಈ ಬಾರಿಯ ವಿಶ್ವಕಪ್ಗೆ ಅದ್ಧೂರಿ ತೆರೆಬಿದ್ದಿದೆ. ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಹೀಗಾಗಿ ಟಿ20 ವಿಶ್ವಕಪ್ನ ಯಶಸ್ಸು ಐಸಿಸಿಯ ಮಹತ್ವದ ಕೆಲಸಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ವಾಸ್ತವವಾಗಿ ಕ್ರಿಕೆಟನ್ನು ಒಲಂಪಿಕ್ಸ್ (Olympics) ಕ್ರೀಡಾಕೂಟದ ಭಾಗವನ್ನಾಗಿ ಮಾಡಬೇಕೆಂದು ಐಸಿಸಿ ಬಹಳ ವರ್ಷಗಳಿಂದ ಈ ಸಲುವಾಗಿ ಕೆಲಸ ಮಾಡುತ್ತಿದೆ. ಈಗ ಹೊರಬಿದ್ದಿರುವ ವರದಿಯ ಪ್ರಕಾರ, 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ (2028 Los Angeles Olympics) ಟಿ20 ಕ್ರಿಕೆಟ್‌ಗೆ ಪ್ರವೇಶ ಸಿಗಬಹುದು ಎಂದು ವರದಿಯಾಗಿದೆ.
2028ರ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್ ಅನ್ನು ಸೇರಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಇದಕ್ಕೆ ಪೂರಕವೆಂಬಂತೆ 100 ವರ್ಷಗಳ ನಂತರ ಮೊದಲ ಬಾರಿಗೆ ಒಲಂಪಿಕ್ಸ್ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಥಾನ ಪಡೆಯಲಿದೆ ಎಂದು ಬ್ರಿಟಿಷ್ ಪತ್ರಿಕೆ ಟೆಲಿಗ್ರಾಫ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಆಡಲಾಗಿದೆ. 1900 ರ ಒಲಿಂಪಿಕ್ಸ್‌ನಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಟೆಸ್ಟ್ ಪಂದ್ಯವನ್ನು ನಡೆಸಲಾಗಿತ್ತು. ಈ ಪಂದ್ಯದಲ್ಲಿ ಬ್ರಿಟನ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
9 ಕ್ರೀಡೆಗಳ ಕಿರು ಪಟ್ಟಿಯಲ್ಲಿ ಸ್ಥಾನ
ಅಂದಿನಿಂದ, ಕ್ರಿಕೆಟ್ ಮತ್ತು ಒಲಿಂಪಿಕ್ಸ್ ನಡುವಿನ ಅಂತರವು ಹೆಚ್ಚಾಯಿತು. ಟಿ20 ಕ್ರಿಕೆಟ್ ಬಂದ ಮೇಲೆ ಒಲಂಪಿಕ್ಸ್ಗೆ ಕ್ರಿಕೆಟ್ ಆಟವನ್ನು ಸಹ ಸೇರಿಸಬೇಕೆಂಬ ಬೇಡಿಕೆ ಬಂದಿದ್ದು, ಕಳೆದ 2-3 ವರ್ಷಗಳಲ್ಲಿ ಈ ಪ್ರಯತ್ನಗಳು ತೀವ್ರಗೊಳ್ಳತೊಡಗಿದವು. ಈ ಹಿಂದೆ, 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಇರಿಸಲು ಪ್ರಯತ್ನಗಳು ನಡೆದವು. ಆದರೆ ಈ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಈಗ 2028 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೆ ಜಾಗ ಸಿಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಟೆಲಿಗ್ರಾಫ್ ವರದಿ ಪ್ರಕಾರ ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಪ್ರಮುಖ ಕ್ರೀಡೆಗಳಲ್ಲದೆ, ಐಚ್ಛಿಕ ಕ್ರೀಡೆಯಾಗಿ ಆಯ್ಕೆಯಾದ 9 ಕ್ರೀಡೆಗಳಲ್ಲಿ ಟಿ20 ಕ್ರಿಕೆಟ್ ಕೂಡ ಸ್ಥಾನ ಪಡೆದಿದೆ.
ತಲಾ 6 ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳಿಗೆ ಸ್ಥಾನ
ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೆ ಸ್ಥಾನ ನೀಡುವ ಸಲುವಾಗಿ ಐಸಿಸಿಯಿಂದ ಮಹಿಳಾ ಮತ್ತು ಪುರುಷರಲ್ಲಿ ತಲಾ 6 ತಂಡಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾಪದ ಅಡಿಯಲ್ಲಿ, ತಲಾ 3 ತಂಡಗಳ ಎರಡು ಗುಂಪುಗಳನ್ನು ರಚಿಸಲಾಗುತ್ತದೆ. ಈ ಪೈಕಿ ತಲಾ 2 ತಂಡಗಳು ಸೆಮಿಫೈನಲ್ ತಲುಪಲಿವೆ. ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ತಲಾ 6 ತಂಡಗಳನ್ನು ಒಲಿಂಪಿಕ್ಸ್ಗೆ ಆಯ್ಕೆ ಮಾಡಲಾಗುತ್ತದೆ. ಈಗ ಕ್ರಿಕೆಟ್‌ಗೆ ಸ್ಥಾನ ಸಿಗುತ್ತದೋ ಇಲ್ಲವೋ ಎಂಬುದು ಮುಂದಿನ ವರ್ಷ ಸೆಪ್ಟೆಂಬರ್ನಲ್ಲಿ ನಿರ್ಧಾರವಾಗುವ ನಿರೀಕ್ಷೆ ಇದೆ.
ಕಾಮನ್ವೆಲ್ತ್ನಲ್ಲಿ ಸಿಕ್ಕ ಯಶಸ್ಸು
ಕಳೆದ ಎರಡು ವರ್ಷಗಳಲ್ಲಿ, ಐಸಿಸಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಲು ವಿಶೇಷ ಪ್ರಯತ್ನಗಳನ್ನು ಮಾಡಿತು. ಇದರ ಅಡಿಯಲ್ಲಿ, ಮಹಿಳಾ ಟಿ20 ಕ್ರಿಕೆಟ್ ಅನ್ನು ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಸೇರಿಸಲಾಯಿತು. ಈ ಕ್ರೀಡಾಕೂಟದಲ್ಲಿ ಕ್ರಿಕೆಟ್ ಭಾರಿ ಯಶಸ್ಸು ಸಾಧಿಸಿತು. ಇದಲ್ಲದೆ, ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಲು 2024 ರ ಟಿ20 ವಿಶ್ವಕಪ್ ಆತಿಥ್ಯವನ್ನು ವೆಸ್ಟ್ ಇಂಡೀಸ್ ಜೊತೆಗೆ ಅಮೆರಿಕಕ್ಕೂ ನೀಡಲಾಗಿದೆ.
Published On - 4:45 pm, Sat, 19 November 22