AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಶತಕ… ಕೆಎಲ್ ರಾಹುಲ್ ಹೆಸರಿಗೆ ‘ಸಪ್ತ’ ದಾಖಲೆಗಳ ಸೇರ್ಪಡೆ

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 351 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 48.2 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 352 ರನ್​ಗಳಿಸಿ ಐದು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಒಂದು ಶತಕ... ಕೆಎಲ್ ರಾಹುಲ್ ಹೆಸರಿಗೆ 'ಸಪ್ತ' ದಾಖಲೆಗಳ ಸೇರ್ಪಡೆ
Kl Rahul Image Credit source: GettyImages
ಝಾಹಿರ್ ಯೂಸುಫ್
|

Updated on: Oct 04, 2026 | 7:36 AM

Share

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಶನಿವಾರ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ತಂಡವು 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ರಾಹುಲ್, ವಿಂಡೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಕೇವಲ 87 ಎಸೆತಗಳಲ್ಲಿ ಅಜೇಯ 129 ರನ್ (10 ಬೌಂಡರಿ, 6 ಸಿಕ್ಸರ್) ಚಚ್ಚಿದರು.  ಈ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ಭಾರತ 351 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದಲ್ಲದೆ, ರಾಹುಲ್ ತಮ್ಮ ಹೆಸರಿಗೆ ಹಲವು ಐತಿಹಾಸಿಕ ದಾಖಲೆಗಳನ್ನು ಬರೆದುಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

  1. 10,000 ರನ್‌: ಈ ಪಂದ್ಯದ ಇನ್ನಿಂಗ್ಸ್ ವೇಳೆ ಕೆ.ಎಲ್. ರಾಹುಲ್ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20 ಸೇರಿ) 10,000 ರನ್‌ಗಳ ಮಹತ್ವದ ಮೈಲಿಗಲ್ಲನ್ನು ತಲುಪಿದರು. ಈ ವಿಶಿಷ್ಟ ಸಾಧನೆ ಮಾಡಿದ ಭಾರತದ 15ನೇ ಬ್ಯಾಟರ್ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.
  2. ಧೋನಿ ದಾಖಲೆಗೆ ಸರಿಸಮ: ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 4 ಶತಕಗಳನ್ನು ಸಿಡಿಸಿದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ದಾಖಲೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ.
  3. ದ್ರಾವಿಡ್ ದಾಖಲೆ ಬ್ರೇಕ್: ಈ ಪಂದ್ಯದಲ್ಲಿ ರಾಹುಲ್ ಬಾರಿಸಿದ ಅಜೇಯ 129 ರನ್ ಗಳೇ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವಿಕೆಟ್ ಕೀಪರ್ ಒಬ್ಬರು ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಈ ಇನ್ನಿಂಗ್ಸ್ ಮೂಲಕ ಅವರು 2002ರಲ್ಲಿ ಅಹಮದಾಬಾದ್‌ನಲ್ಲಿ ರಾಹುಲ್ ದ್ರಾವಿಡ್ (ಅಜೇಯ 109 ರನ್) ಸ್ಥಾಪಿಸಿದ್ದ 24 ವರ್ಷಗಳ ಹಳೆಯ ದಾಖಲೆಯನ್ನು ಅಧಿಕೃತವಾಗಿ ಮುರಿದಿದ್ದಾರೆ.
  4. ಅತ್ಯುತ್ತಮ ಏಕದಿನ ಸ್ಕೋರ್: ಕೆಎಲ್ ರಾಹುಲ್ ಬಾರಿಸಿದ ಅಜೇಯ 129 ರನ್, ಅವರ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 112 ರನ್​ಗಳು ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.
  5. 4ನೇ ಬ್ಯಾಟರ್​​: 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಟೀಮ್ ಇಂಡಿಯಾ ಪರ ಗರಿಷ್ಠ ಸ್ಕೋರ್​ ಗಳಿಸಿದ 4ನೇ ಬ್ಯಅಟರ್ ಎಂಬ ಹೆಗ್ಗಳಿಕೆಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಈ ಹಿಂದೆ 5ನೇ ಕ್ರಮಾಂಕದಲ್ಲಿ ಕಪಿಲ್ ದೇವ್ (175*), ಧೋನಿ (139*) ಮತ್ತು ಯುವರಾಜ್ ಸಿಂಗ್ (139) ಮಾತ್ರ ರಾಹುಲ್‌ಗಿಂತ ಹೆಚ್ಚಿನ ಸ್ಕೋರ್ ಗಳಿಸಿದ್ದರು. ಇದೀಗ ರಾಹುಲ್ ಈ ಎಲೈಟ್ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನ ಪಡೆದಿದ್ದಾರೆ.
  6. ಯುವಿ ದಾಖಲೆ ಬ್ರೇಕ್: ಕೆ.ಎಲ್. ರಾಹುಲ್ ಬಾರಿಸಿದ ಅಜೇಯ 129 ರನ್ ಗಳ ಮೂಲಕ ಅವರು ಒಟ್ಟಾರೆಯಾಗಿ ವೆಸ್ಟ್ ಇಂಡೀಸ್ ವಿರುದ್ಧ 5ನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಯುವರಾಜ್ ಸಿಂಗ್ (110) ಅವರ ದಾಖಲೆಯನ್ನು ಮುರಿದು ಇತಿಹಾಸ ಬರೆದಿದ್ದಾರೆ.
  7. ದಿಲ್ಶನ್ ದಾಖಲೆ ಪತನ: ವೆಸ್ಟ್ ಇಂಡೀಸ್ ವಿರುದ್ಧ 5ನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಗರಿಷ್ಠ ಸ್ಕೋರ್​ ಗಳಿಸಿದ ವಿಕೆಟ್‌ಕೀಪರ್-ಬ್ಯಾಟರ್ ಎಂಬ ದಾಖಲೆ ಕೆಎಲ್ ರಾಹುಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ದಿಲ್ಶನ್ (ಅಜೇಯ 117 ರನ್) ಹೆಸರಲ್ಲಿತ್ತು. ಇದೀಗ 129 ರನ್​ಗಳ ಅಜೇಯ ಶತಕದೊಂದಿಗೆ ಕೆಎಲ್ ರಾಹುಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಕೆನಡಾ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ಒಟ್ಟಾರೆಯಾಗಿ ಹೇಳುವುದಾದರೆ, ಮುಲ್ಲನ್‌ಪುರದಲ್ಲಿ ನಡೆದ ಈ ಪಂದ್ಯ ಕೆ.ಎಲ್. ರಾಹುಲ್ ಅವರ ಕ್ರಿಕೆಟ್ ಬದುಕಿನ ಅತ್ಯಂತ ಸ್ಮರಣೀಯ ಇನ್ನಿಂಗ್ಸ್‌ಗಳಲ್ಲಿ ಒಂದಾಗಿ ದಾಖಲಾಗಿದೆ. ಗಾಯದ ಸಮಸ್ಯೆ ಹಾಗೂ ಫಾರ್ಮ್ ಕೊರತೆಯಿಂದಾಗಿ ಹಲವು ದಿನಗಳಿಂದ ಟೀಕೆ ಎದುರಿಸುತ್ತಿದ್ದಕನ್ನಡಿಗ, ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತ ಹಾಗೂ ಸ್ಫೋಟಕ ಆಟವಾಡುವ ಮೂಲಕ ತಾವೊಬ್ಬ ಕ್ಲಾಸ್ ಬ್ಯಾಟರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More