ಆಗಸ್ಟ್ 30 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಪಿಸಿಬಿ ತನ್ನ 12 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ ತಂಡದ ಪ್ರಮುಖ ವೇಗದ ಬೌಲರ್ ಶಾಹೀನ್ ಆಫ್ರಿದಿಯನ್ನು ಎರಡನೇ ಟೆಸ್ಟ್‌ನಿಂದ ಹೊರಗಿಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ತಂಡದ ಬೌಲಿಂಗ್ ವಿಭಾಗದ ನೇತೃತ್ವವಹಿಸಿಕೊಂಡಿರುವ ಅಫ್ರಿದಿಯನ್ನು ನಿರ್ಣಾಯಕ ಟೆಸ್ಟ್‌ನಿಂದ ಹೊರಗಿಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅದರಂತೆ ಸದ್ಯಕ್ಕೆ ಹರಡಿರುವ ವದಂತಿಯ ಪ್ರಕಾರ, ಅಫ್ರಿದಿ, ಹಾಲಿ ನಾಯಕ ಶಾನ್ ಮಸೂದ್ ಜತೆಗೆ ಜಗಳ ಮಾಡಿಕೊಂಡಿದ್ದು, ಈ ಕಾರಣದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಮೊದಲ ಟೆಸ್ಟ್‌ನಲ್ಲಿ ಸೋಲಿನ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಇಬ್ಬರ ನಡುವೆ ಜಗಳವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವರದಿಗಳು ಹೇಳುತ್ತಿವೆ. ಆದರೆ ಈ ಎಲ್ಲಾ ವದಂತಿಗಳ ನಡುವೆ ಕೋಚ್ ಜೇಸನ್ ಗಿಲ್ಲೆಸ್ಪಿ, ಅಫ್ರಿದಿಯನ್ನು ತಂಡದಿಂದ ಹೊರಗಿಡಲು ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.
ಅಫ್ರಿದಿಯನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಮಾಹಿತಿ ನೀಡಿರುವ ಗಿಲ್ಲೆಸ್ಪಿ, ‘ಇದೊಂದು ಕಾರ್ಯತಂತ್ರದ ನಿರ್ಧಾರ. ಕೂಲಂಕುಷವಾಗಿ ಪರಿಶೀಲಿಸಿ ತೆಗೆದುಕೊಂಡ ನಿರ್ಧಾರ ಇದಾಗಿದೆ. ಶಾಹೀನ್ ಅವರ ಬೌಲಿಂಗ್‌ನಲ್ಲಿ ಕೆಲವು ವಿಷಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇದು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿದೆ. ಅವರು ಪಾಕಿಸ್ತಾನದ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಲು ಬಯಸಿದ್ದೇವೆ. ಅಲ್ಲದೆ ಈ ಬಗ್ಗೆ ನಾನು ಶಾಹೀನ್ ಜೊತೆ ಮಾತನಾಡಿದ್ದು, ಈ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಅವರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಇದಲ್ಲದೆ ಈ ಪಂದ್ಯಕ್ಕಾಗಿ ನಾವು ಉತ್ತಮ ಸಂಯೋಜನೆಯನ್ನು ಎದುರು ನೋಡುತ್ತಿದ್ದೆವು. ನಾವು ಪಂದ್ಯಕ್ಕೂ ಮುನ್ನ ಪರಿಸ್ಥಿತಿಗಳನ್ನು ನೋಡಿ ನಮ್ಮ ಬೌಲಿಂಗ್ ದಾಳಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದಲ್ಲದೆ ಶಾಹೀನ್, ಕಳೆದ ವಾರವಷ್ಟೇ ತಂದೆಯಾಗಿದ್ದಾರೆ. ಹೀಗಾಗಿ ಅವರು ಕುಟುಂಬದೊಂದಿಗೆ ಸಮಯ ಕಳೆಯಲು ನಾವು ಅವಕಾಶವನ್ನು ನೀಡುತ್ತಿದ್ದೇವೆ ಎಂದಿದ್ದಾರೆ.
Pakistan men's red-ball head coach Jason Gillespie's press conference ahead of the second #PAKvBAN Test 🏏#TestOnHai pic.twitter.com/anpzl5fKpS
— Pakistan Cricket (@TheRealPCB) August 29, 2024
ವಾಸ್ತವವಾಗಿ ಶಾಹೀನ್ ಅಫ್ರಿದಿ 2023 ರ ಜುಲೈನಲ್ಲಿ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿದ್ದರು. ಅಂದಿನಿಂದ ಅವರು 10 ಇನ್ನಿಂಗ್ಸ್‌ಗಳಲ್ಲಿ ಕೇವಲ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅವರು ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಮೊದಲ ಟೆಸ್ಟ್ ಪಂದ್ಯದ ವೇಳೆ ಶಾಹೀನ್ ಮತ್ತು ಶಾನ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬುದು ಬಹಿರಂಗಗೊಂಡಿತ್ತು. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಯಕ ಶಾನ್ ಮಸೂದ್, ಶಾಹೀನ್ ಅವರ ಭುಜದ ಮೇಲೆ ಕೈಹಾಕಿದರು. ಆದರೆ ಇದನ್ನು ಇಷ್ಟಪಡದ ಅಫ್ರಿದಿ, ಶಾನ್ ಮಸೂದ್ ಅವರ ಕೈಯನ್ನು ಅವರ ಭುಜದಿಂದ ಕೆಳಗಿಳಿಸಿದ್ದಾರೆ. ಇದೀಗ ಈ ವಿಡಿಯೋವನ್ನು ನೋಡಿದವರು ಈ ಇಬ್ಬರ ನಡುವೆ ಏನು ಸರಿ ಇಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ.
Pakistan has dropped Shaheen Afridi for the 2nd Test against Bangladesh.pic.twitter.com/RJuiHxnanq
— Don Cricket 🏏 (@doncricket_) August 29, 2024
ಶಾನ್ ಮಸೂದ್ (ನಾಯಕ), ಸೌದ್ ಶಕೀಲ್ (ಉಪನಾಯಕ), ಅಬ್ರಾರ್ ಅಹ್ಮದ್, ಮೊಹಮ್ಮದ್ ಅಲಿ, ಸಲ್ಮಾನ್ ಅಲಿ ಅಗಾ, ಸೈಮ್ ಅಯೂಬ್, ಬಾಬರ್ ಅಜಮ್, ಮೀರ್ ಹಮ್ಜಾ, ಮೊಹಮ್ಮದ್ ರಿಜ್ವಾನ್, ಅಬ್ದುಲ್ಲಾ ಶಫೀಕ್, ನಸೀಮ್ ಶಾ ಮತ್ತು ಖುರ್ರಂ ಶಹಜಾದ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Thu, 29 August 24