AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡಂಕಿ ದಾಟಿದ್ದು ಕೇವಲ ಮೂವರು ಮಾತ್ರ; ಇಂಗ್ಲೆಂಡ್‌ ವಿರುದ್ಧ ಮತ್ತೆ ಮುಗ್ಗರಿಸಿದ ಪಾಕಿಸ್ತಾನ

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಕೇವಲ 133 ರನ್‌ಗಳಿಗೆ ಆಲೌಟ್ ಆಗಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮತ್ತೊಮ್ಮೆ 200 ರನ್ ಗಡಿ ತಲುಪಲು ವಿಫಲವಾಗಿದೆ. ಸರಣಿಯಲ್ಲಿ ಒಮ್ಮೆಯೂ 200 ರನ್ ಬಾರಿಸದ ಪಾಕಿಸ್ತಾನ, ಮೊದಲ ಎರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿತ್ತು. ತಂಡದಲ್ಲಿ ಬದಲಾವಣೆ ಮಾಡಿದರೂ ಮಾನ ಉಳಿಸಲು ಸಾಧ್ಯವಾಗಿಲ್ಲ.

ಎರಡಂಕಿ ದಾಟಿದ್ದು ಕೇವಲ ಮೂವರು ಮಾತ್ರ; ಇಂಗ್ಲೆಂಡ್‌ ವಿರುದ್ಧ ಮತ್ತೆ ಮುಗ್ಗರಿಸಿದ ಪಾಕಿಸ್ತಾನ
ಇಂಗ್ಲೆಂಡ್ Vs ಪಾಕಿಸ್ತಾನ
ಪೃಥ್ವಿಶಂಕರ
|

Updated on:Sep 09, 2026 | 7:46 PM

Share

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಈ ಪಂದ್ಯದಲ್ಲೂ 200 ರನ್​ಗಳ ಗಡಿ ಮುಟ್ಟಲು ವಿಫಲವಾಗಿದೆ. ಇಂಗ್ಲೆಂಡ್‌ ವಿರುದ್ಧದ ಈ ಸರಣಿಯಲ್ಲಿ ಪಾಕಿಸ್ತಾನ ಒಮ್ಮೆಯೂ 200 ರನ್​ ಬಾರಿಸಿಲ್ಲ. ಇದರ ಪರಿಣಾಮವಾಗಿ ಪಾಕಿಸ್ತಾನ ಮೊದಲೆರಡು ಪಂದ್ಯಗಳನ್ನು ಹೀನಾಯವಾಗಿ ಸೋತು ಸರಣಿಯನ್ನು ಕಳೆದುಕೊಂಡಿತ್ತು. ಹೀಗಾಗಿಯೇ ಮೂರನೇ ಪಂದ್ಯಕ್ಕೆ ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿತ್ತು. ಆದರೆ ಈ ಬದಲಾವಣೆಗಳು ಕೂಡ ಪಾಕಿಸ್ತಾನದ ಮಾನ ಉಳಿಸಲಿಲ್ಲ. ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪಾಕಿಸ್ತಾನ ಕೇವಲ 133 ರನ್​ಗಳಿಗೆ ಆಲೌಟ್ ಆಗಿದೆ.

ಒಂದಂಕಿಗೆ ಸುಸ್ತಾದ ಟಾಪ್ ಆರ್ಡರ್

ಈ ಪಂದ್ಯದಲ್ಲಿಯೂ ಪಾಕಿಸ್ತಾನ ಕಳಪೆ ಆರಂಭ ಪಡೆದುಕೊಂಡಿತು. ಕೇವಲ 48 ರನ್‌ಗಳಿಗೆ ತಂಡದ ಐದು ವಿಕೆಟ್‌ಗಳು ಪತನಗೊಂಡವು. ಅದರಲ್ಲೂ ತಂಡದ ಐವರು ಅಗ್ರಕ್ರಮಾಂಕದ ಬ್ಯಾಟರ್​ಗಳಿಗೆ ಒಂದಂಕಿ ದಾಟಲು ಸಾಧ್ಯವಾಗಲಿಲ್ಲ. ನಾಯಕ ಬಾಬರ್ ಆಝಂ, ಶಾನ್ ಮಸೂದ್, ಸೈಮ್ ಅಯೂಬ್ ಈ ಮೂವರಲ್ಲಿ ಯಾರಿಗೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸೈಮ್ ರನ್ ಗಳಿಸದೆ ಔಟಾದರೆ, ಅಜಾನ್ ಅವೈಸ್ 9, ಅಬ್ದುಲ್ಲಾ ಶಫೀಕ್ 3, ಶಾನ್ ಮಸೂದ್ 5, ಮತ್ತು ನಾಯಕಿ ಬಾಬರ್ ಆಝಂ 7 ರನ್ ಕಲೆಹಾಕಲಷ್ಟೇ ಶಕ್ತರಾದರು.

43 ರನ್ ಬಾರಿಸಿದ ಸೌದ್ ಶಕೀಲ್

ಆದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೌದ್ ಶಕೀಲ್ ತಂಡದ ಪರ ಏಕಾಂಗಿ ಹೋರಾಟ ನಡೆಸಿ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ತಮ್ಮ ಇನ್ನಿಂಗ್ಸ್​ನಲ್ಲಿ 47 ಎಸೆತಗಳನ್ನು ಎದುರಿಸಿದ ಶಕೀಲ್ ಏಳು ಬೌಂಡರಿಗಳೊಂದಿಗೆ 43 ರನ್ ಗಳಿಸಿದರು. ಆದಾಗ್ಯೂ, ಇನ್ನೊಂದು ತುದಿಯಿಂದ ಅವರಿಗೆ ಬೆಂಬಲ ಸಿಗಲಿಲ್ಲ. ಪರಿಣಾಮವಾಗಿ ಪಾಕಿಸ್ತಾನ 107 ರನ್‌ಗಳಿಗೆ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತು.

ಪಾಕ್ ತಂಡದಲ್ಲಿ 4 ಬದಲಾವಣೆ; ಮೂವರಿಗೆ ಚೊಚ್ಚಲ ಅವಕಾಶ

ನಾಲ್ಕು ವಿಕೆಟ್ ಪಡೆದ ಜೋಶ್ ಟಾಂಗ್

ಕೊನೆಯಲ್ಲಿ ಮೊಹಮ್ಮದ್ ಅಬ್ಬಾಸ್ ಮತ್ತು ಮೊಹಮ್ಮದ್ ಅಲಿ ಕೊನೆಯ ವಿಕೆಟ್‌ಗೆ 26 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರಿಂದಾಗಿ ಪಾಕಿಸ್ತಾನ 130 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಸೌದ್, ರಜಾವುಲ್ಲಾ ಮತ್ತು ಅಬ್ಬಾಸ್ ಹೊರತುಪಡಿಸಿ, ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಎರಡಂಕಿಯ ಮೊತ್ತ ತಲುಪಲಿಲ್ಲ. ಅಬ್ಬಾಸ್ 36 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 21 ರನ್ ಮತ್ತು ರಜಾವುಲ್ಲಾ 11 ರನ್ ಬಾರಿಸಿದರು. ಮೊಹಮ್ಮದ್ ಅಲಿ ಐದು ರನ್ ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಜೋಶ್ ಟಾಂಗ್ ನಾಲ್ಕು ವಿಕೆಟ್ ಪಡೆದರೆ, ಒಲ್ಲಿ ರಾಬಿನ್ಸನ್ ಮತ್ತು ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Wed, 9 September 26

Follow Us