
ಏಷ್ಯಾಕಪ್ ಟೂರ್ನಿಗಾಗಿ ಭರ್ಜರಿ ಸಿದ್ಧತೆಯಲ್ಲಿರುವ ಪಾಕಿಸ್ತಾನ್ ತಂಡಕ್ಕೆ ಅಫ್ಘಾನಿಸ್ತಾನ್ ಆಘಾತ ನೀಡಿದೆ. ಅದು ಕೂಡ ಪಾಕ್ ಪಡೆಯನ್ನು ಮಕಾಡೆ ಮಲಗಿಸುವ ಮೂಲಕ. ಶಾರ್ಜಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸುವಲ್ಲಿ ಅಫ್ಘಾನಿಸ್ತಾನ್ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನ್ ಪರ ಆರಂಭಿಕ ದಾಂಡಿಗ ಸೆದಿಖುಲ್ಲಾ ಅಟಲ್ 45 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ ಗಳೊಂದಿಗೆ 64 ರನ್ ಬಾರಿಸಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಬ್ರಾಹಿಂ ಝದ್ರಾನ್ 45 ಎಸೆತಗಳಲ್ಲಿ 8 ಫೋರ್ ಹಾಗೂ 1 ಸಿಕ್ಸ್ ನೊಂದಿಗೆ 65 ರನ್ ಕಲೆಹಾಕಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಅಫ್ಘಾನಿಸ್ತಾನ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು.
170 ರನ್ ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 75 ರನ್ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಆ ಬಳಿಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದ್ದು ಬೌಲರ್ಗಳು. ಅದರಲ್ಲೂ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿಸ್ ರೌಫ್ 16 ಎಸೆತಗಳಲ್ಲಿ 4 ಸಿಕ್ಸರ್ಗಳೊಂದಿಗೆ 34 ರನ್ ಬಾರಿಸಿದ್ದರು.
ಅಂತಿಮವಾಗಿ ಪಾಕಿಸ್ತಾನ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪಾಕ್ ಪಡೆ 18 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ತಂಡದ ಬೌಲರ್ಗಳ ಪ್ರದರ್ಶನವನ್ನು ಕೊಂಡಾಡಿದರು.
ಶಾರ್ಜಾ ಪಿಚ್ನಲ್ಲಿ 170 ರನ್ಗಳನ್ನು ಚೇಸ್ ಂಆಡುವುದು ಕಷ್ಟಕರವೇನಲ್ಲ, ಅದು ಸುಲಭ ಎಂದು ಭಾವಿಸುತ್ತೇನೆ. ಆದರೆ ನಮ್ಮ ಬ್ಯಾಟರ್ಗಳು ಆರಂಭದಲ್ಲಿ ಚೆನ್ನಾಗಿ ಆಡಿದರೂ ಮಧ್ಯಮ ಕ್ರಮಾಂಕದಲ್ಲಿ ಸುಲಭವಾಗಿ ವಿಕೆಟ್ ಕೈಚೆಲ್ಲಿದರು. ಮಧ್ಯಮ ಓವರ್‌ಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದ್ದು ಸೋಲಿಗೆ ಕಾರಣವಾಯಿತು.
ಇದಾಗ್ಯೂ ನಮ್ಮ ಬೌಲರ್ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ನಮ್ಮ ಬ್ಯಾಟರ್ಗಳು ಸ್ವಲ್ಪ ಎಚ್ಚರಿಕೆಯಿಂದ ಆಡಿದ್ದರೆ ಪಂದ್ಯದ ಫಲಿತಾಂಶ ಬೇರೆಯಾಗಿರುತ್ತಿತ್ತು. ಆದರೆ ಅಫ್ಘಾನಿಸ್ತಾನ್ ಸ್ಪಿನ್ನರ್ಗಳು ನಮ್ಮ ಅವಕಾಶಗಳನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಪಾಕಿಸ್ತಾನ್ ತಂಡದ ಸೋಲನುಭವಿಸಿದೆ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.
ಇದನ್ನೂ ಓದಿ: ಬೇಡದ ದಾಖಲೆಯೊಂದಿಗೆ ಕೆರಿಯರ್ ಆರಂಭಿಸಿದ ಸೋನಿ ಬೇಕರ್
ಇತ್ತ ಸಲ್ಮಾನ್ ಅಲಿ ಅಘಾ ಬೌಲರ್ಗಳು ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಎನ್ನಲು ಮುಖ್ಯ ಕಾರಣ, ಪಾಕಿಸ್ತಾನ್ ಪರ ಈ ಪಂದ್ಯದಲ್ಲಿ ಗರಿಷ್ಠ ಸ್ಕೋರ್ಗಳಿಸಿದ್ದೇ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿಸ್ ರೌಫ್. ಅಂತಿಮ ಓವರ್ಗಳ ವೇಳೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರೌಫ್ 34 ರನ್ಗಳಿಸಿದ್ದೇ ಗರಿಷ್ಠ ಸ್ಕೋರ್. ಹೀಗಾಗಿಯೇ ಪಾಕ್ ನಾಯಕ ಬೌಲರ್ಗಳ ಬ್ಯಾಟಿಂಗ್ ಅನ್ನು ಹೊಗಳಿದ್ದಾರೆ.