ಟಿ20 ಲೀಗ್‌ನಲ್ಲಿ ಆಡಲು ಇಷ್ಟೆಲ್ಲಾ ಹಣ ಕೊಡಬೇಕಾ? ಪಾಕ್ ಆಟಗಾರರ ಸಂಕಷ್ಟ ಬಯಲು
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೊಂದು ವಿವಾದಕ್ಕೆ ಸಿಲುಕಿದೆ. ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಆಟಗಾರರಿಗೆ ಅಗತ್ಯವಾದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡಲು ಪ್ರತಿ ಆಟಗಾರನಿಂದ 25 ಲಕ್ಷ ಕೇಳುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಭವಿಷ್ಯ ಡೋಲಾಯಮಾನವಾಗಿದ್ದು, ಇದು ಅವರ ವೃತ್ತಿಜೀವನಕ್ಕೆ ಹೊಡೆತ ನೀಡುವ ಆತಂಕ ಸೃಷ್ಟಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ವಿವಾದಗಳಿಲ್ಲದ ದಿನವಿಲ್ಲ ಎನ್ನಬಹುದು. ಕೆಲವೊಮ್ಮೆ ಆಟಗಾರರು ವಿವಾದ ಮಾಡಿಕೊಂಡರೆ, ಇನ್ನು ಕೆಲವೊಮ್ಮೆ ಮಂಡಳಿಯೇ ವಿವಾದಕ್ಕೆ ಸಿಲುಕುತ್ತದೆ. ಇದೀಗ ಪಾಕ್ ಮಂಡಳಿಯ ಮೇಲೆ ಅತಿದೊಡ್ಡ ಆರೋಪವೊಂದು ಕೇಳಿಬಂದಿದೆ. ವಾಸ್ತವವಾಗಿ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಬಯಸಿರುವ ಪಾಕಿಸ್ತಾನದ ಕ್ರಿಕೆಟಿಗರಿಗೆ ಈಗ ಹೊಸ ಸಮಸ್ಯೆ ಎದುರಾಗಿದೆ. ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಅಗತ್ಯ ಅನುಮತಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರತಿ ಆಟಗಾರನಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲು 25 ಸಾವಿರ ಅಮೆರಿಕನ್ ಡಾಲರ್, ಅಂದರೆ ಸುಮಾರು 22 ಲಕ್ಷಕ್ಕೂ ಹೆಚ್ಚು ಹಣ ಕೇಳಲಾಗುತ್ತಿದೆ ಎಂದು ಲೀಗ್ ಆಯೋಜಕರಿಗೆ ಸಂಬಂಧಿಸಿದ ಮೂಲಗಳು ಆರೋಪಿಸಿವೆ.
ನೇಪಾಳ ಪ್ರೀಮಿಯರ್ ಲೀಗ್ ಅಕ್ಟೋಬರ್ 26ರಿಂದ ನವೆಂಬರ್ 21ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನ ಟಿ20 ತಂಡದ ನಾಯಕ ಸಾಹಿಬ್‌ಜಾದಾ ಫರ್ಹಾನ್ ಸೇರಿದಂತೆ ಹೈದರ್ ಅಲಿ, ಹುನೈನ್ ಶಾ, ಹುಸೇನ್ ತಲಾತ್, ಇಫ್ತಿಖಾರ್ ಅಹ್ಮದ್, ಹಸನ್ ಅಲಿ ಮತ್ತು ಉಸಾಮಾ ಮಿರ್ ಆಡಬೇಕಿದೆ. ಈ ಆಟಗಾರರ ಪೈಕಿ ಕೆಲವರು ಈಗಾಗಲೇ ನೇಪಾಳದ ರಾಜಧಾನಿ ಕಠ್ಮಂಡುವಿಗೆ ತಲುಪಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ಅನುಮತಿ ಸಮಸ್ಯೆ ಬಗೆಹರಿಯುವವರೆಗೆ ತಮ್ಮ ಪ್ರಯಾಣವನ್ನೇ ಮುಂದೂಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಎನ್‌ಒಸಿ ಪಡೆದಿದ್ದ ಕೆಲವು ಆಟಗಾರರ ಅನುಮತಿಯನ್ನೂ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.
ವಿದೇಶಿ ಲೀಗ್‌ಗಳಲ್ಲಿ ಆಡಲು ಎನ್‌ಒಸಿ ಯಾಕೆ ಬೇಕು?
ಒಂದು ದೇಶದ ಕ್ರಿಕೆಟಿಗ ಮತ್ತೊಂದು ದೇಶದಲ್ಲಿ ನಡೆಯುವ ಫ್ರಾಂಚೈಸಿ ಲೀಗ್‌ನಲ್ಲಿ ಆಡಬೇಕಾದರೆ, ಸಾಮಾನ್ಯವಾಗಿ ತನ್ನ ದೇಶದ ಕ್ರಿಕೆಟ್ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬೇಕು. ಈ ಅನುಮತಿ ಇಲ್ಲದೆ ವಿದೇಶಿ ಲೀಗ್‌ಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವ ಪಾಕಿಸ್ತಾನಿ ಆಟಗಾರರಿಗೂ ಈ ನಿಯಮ ಅನ್ವಯಿಸುತ್ತದೆ.
ಒಂದು ವೇಳೆ ಅನುಮತಿ ಸಿಗುವುದು ವಿಳಂಬವಾದರೆ, ಈಗಾಗಲೇ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವ ತಂಡಗಳು ಬೇರೆ ಆಟಗಾರರನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಬಹುದು. ಅದರಲ್ಲೂ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಂತಹ ಸಮಸ್ಯೆ ಎದುರಾದರೆ, ತಂಡಗಳ ಸಿದ್ಧತೆ ಮತ್ತು ಆಟದ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಅಮೆರಿಕದ ಟಿ20 ಲೀಗ್‌ನಲ್ಲೂ ಇಂಥದ್ದೇ ಆರೋಪ
ಪಾಕಿಸ್ತಾನಿ ಆಟಗಾರರ ಎನ್‌ಒಸಿ ವಿಚಾರದಲ್ಲಿ ಇಂತಹ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ವರ್ಷದ ಜುಲೈನಲ್ಲಿ ಅಮೆರಿಕದಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲೂ ಇದೇ ರೀತಿಯ ಆರೋಪಗಳು ಕೇಳಿಬಂದಿದ್ದವು. ಕೆಲವು ಫ್ರಾಂಚೈಸಿಗಳಿಗೆ ಸಂಬಂಧಿಸಿದ ಮೂಲಗಳ ಪ್ರಕಾರ, ಪಾಕಿಸ್ತಾನದ ಆಟಗಾರರಿಗೆ ಎನ್‌ಒಸಿ ನೀಡಲು ತಲಾ 25 ಸಾವಿರ ಡಾಲರ್ ಶುಲ್ಕ ಕೇಳಲಾಗಿತ್ತು ಎನ್ನಲಾಗಿದೆ. ಇದರಿಂದ ಪಾಕಿಸ್ತಾನಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ ಎಂಬ ಆತಂಕ ಫ್ರಾಂಚೈಸಿಗಳಲ್ಲಿ ಮೂಡಿತ್ತು.
ಪಾಕ್ ಆಟಗಾರರ ಕ್ರಿಕೆಟ್ ಭವಿಷ್ಯಕ್ಕೆ ಹೊಡೆತ ಬೀಳುತ್ತಾ?
ವಿದೇಶಿ ಟಿ20 ಲೀಗ್‌ಗಳಲ್ಲಿ ಆಡುವುದರಿಂದ ಕ್ರಿಕೆಟಿಗರಿಗೆ ಉತ್ತಮ ಆದಾಯದ ಜೊತೆಗೆ ಬೇರೆ ದೇಶಗಳ ಆಟಗಾರರೊಂದಿಗೆ ಆಡುವ ಅನುಭವವೂ ಸಿಗುತ್ತದೆ. ಇಂತಹ ಲೀಗ್‌ಗಳು ಆಟಗಾರರ ಕೌಶಲ ಹೆಚ್ಚಿಸಿಕೊಳ್ಳಲು ಮತ್ತು ವೃತ್ತಿಜೀವನದಲ್ಲಿ ಮುಂದೆ ಸಾಗಲು ನೆರವಾಗುತ್ತವೆ. ಆದರೆ, ಎನ್‌ಒಸಿ ಪಡೆಯಲು ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಹಾಗೂ ಕೊನೆಯ ಕ್ಷಣದಲ್ಲಿ ಅನುಮತಿ ಸಿಗದಿರುವ ಆತಂಕ ಮುಂದುವರಿದರೆ, ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆಯಿದೆ.
ಇದರಿಂದ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶಗಳು ಕಡಿಮೆಯಾಗುವ ಆತಂಕವೂ ಎದುರಾಗಿದೆ. ಮತ್ತೊಂದೆಡೆ, ವಿದೇಶಿ ಲೀಗ್‌ಗಳಲ್ಲಿ ಆಟಗಾರರು ಭಾಗವಹಿಸುವ ವಿಚಾರದಲ್ಲಿ ರಾಷ್ಟ್ರೀಯ ಕ್ರಿಕೆಟ್ ಮಂಡಳಿಗಳು ಅನುಮತಿ ಪ್ರಕ್ರಿಯೆ ಮತ್ತು ಶುಲ್ಕದ ಬಗ್ಗೆ ಸ್ಪಷ್ಟ ನಿಯಮಗಳನ್ನು ಪ್ರಕಟಿಸಬೇಕು ಎಂಬ ಚರ್ಚೆಯೂ ಶುರುವಾಗಿದೆ. ಸದ್ಯ ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಎನ್‌ಒಸಿಗಾಗಿ 25 ಸಾವಿರ ಡಾಲರ್ ಕೇಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕೃತ ಲಿಖಿತ ದಾಖಲೆಗಳು ಬಹಿರಂಗವಾಗಿಲ್ಲ. ಹೀಗಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರತಿಕ್ರಿಯೆ ಮತ್ತು ಅನುಮತಿ ವಿಚಾರದಲ್ಲಿ ತೆಗೆದುಕೊಳ್ಳುವ ಅಂತಿಮ ನಿರ್ಧಾರದ ಬಳಿಕವಷ್ಟೇ ಈ ವಿವಾದದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Mon, 26 October 26




