ಪಂದ್ಯ ನಡೆಯುವಾಗಲೇ ಫ್ಯಾನ್ಸ್ ಜೊತೆ ಜಗಳಕ್ಕಿಳಿದ ಪಾಕ್ ವೇಗಿ..! ವಿಡಿಯೋ ಸಖತ್ ವೈರಲ್

| Updated By: ಪೃಥ್ವಿಶಂಕರ

Updated on: Dec 05, 2022 | 5:41 PM

ಪಂದ್ಯದ ವೇಳೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದದ ಹಸನ್ ಅಲಿಯನ್ನು ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ಹೀಯಾಳಿಸಲು ಆರಂಭಿಸಿದ್ದಾರೆ. ಇದರಿಂದ ಕೋಪಗೊಂಡ ಅಲಿ ಪ್ರೇಕ್ಷಕರೊಂದಿಗೆ ಜಗಳಕ್ಕಿಳಿದಿದ್ದಾರೆ.

ಪಂದ್ಯ ನಡೆಯುವಾಗಲೇ ಫ್ಯಾನ್ಸ್ ಜೊತೆ ಜಗಳಕ್ಕಿಳಿದ ಪಾಕ್ ವೇಗಿ..! ವಿಡಿಯೋ ಸಖತ್ ವೈರಲ್
ಪಾಕ್ ತಂಡ
Follow us on

ಒಂದೆಡೆ ರಾವಲ್ಪಿಂಡಿಯಲ್ಲಿ (Rawlindi) ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಸಲುವಾಗಿ ಆಂಗ್ಲ ಬೌಲರ್​ಗಳ ಎದುರು ಪಾಕ್ ತಂಡ ಸೆಣಸಾಡುತ್ತಿದ್ದರೆ, ಇನ್ನೊಂದೆಡೆ ಅದೇ ಪಾಕ್ ತಂಡದ ಮಾಜಿ ಆಟಗಾರನೊಬ್ಬ ತನ್ನದೇ ದೇಶದ ಅಭಿಮಾನಿಗಳ ಜೊತೆ ಬಡಿದಾಡಿಕೊಂಡಿದ್ದಾನೆ. ಆ ಆಟಗಾರ ಮತ್ತ್ಯಾರು ಅಲ್ಲ, ಪಾಕಿಸ್ತಾನದ (Pakistan) ಅನುಭವಿ ಬೇಗದ ಬೌಲರ್ ಹಸನ್ ಅಲಿ (Hasan Ali). ಹಸನ್ ಅಲಿ ಸದ್ಯಕ್ಕೆ ರಾಷ್ಟ್ರೀಯ ತಂಡದಿಂದ ದೂರ ಉಳಿದು ಸಾಕಷ್ಟು ಸಮಯವೇ ಕಳೆದಿದೆ. ಹೀಗಾಗಿ ಜೀವನ ನಿರ್ವಹಣೆಗಾಗಿ ಕ್ಲಬ್ ಕ್ರಿಕೆಟ್ ಮೊರೆ ಹೋಗಿರುವ ಹಲಿ, ಇದೀಗ ತನ್ನ ದೇಶದ ಫ್ಯಾನ್ಸ್​ ಜೊತೆಯೇ ಜಗಳ ಮಾಡಿಕೊಂಡಿದ್ದಾರೆ.

28ರ ವರ್ಷದ ಹಸನ್ ಅಲಿಗೆ ಕೆಲ ಸಮಯದಿಂದ ಪಾಕಿಸ್ತಾನ ತಂಡದ ಕದ ತೆರೆದಿಲ್ಲ. ಏಷ್ಯಾಕಪ್​ನಲ್ಲೂ ತಂಡದೊಂದಿಗೆ ಕಾಣಿಸಿಕೊಳ್ಳದ ಅಲಿ, ಟಿ20 ವಿಶ್ವಕಪ್‌ನಲ್ಲಿಯೂ ತಂಡದ ಭಾಗವಾಗಿರಲಿಲ್ಲ. ಈಗ ಬರೋಬ್ಬರಿ 17 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ವಿರುದ್ಧವೂ ಅಲಿಗೆ ಆಡಲು ಅವಕಾಶ ಸಿಕ್ಕಿಲ್ಲ. ಹೀಗಿರುವಾಗ ಬಿಡುವಿನ ವೇಳೆಯಲ್ಲಿ ಕ್ಲಬ್ ತಂಡಗಳ ಪರ ಪಂದ್ಯಗಳನ್ನು ಆಡುತ್ತಿರುವ ಅಲಿ, ಈಗ ಹೊಸ ವಿವಾದದಿಂದ ಮುನ್ನೆಲೆಗೆ ಬಂದಿದ್ದಾರೆ.

ಇದನ್ನೂ ಓದಿ: Shane Warne: ಅಗಲಿದ ಕ್ರಿಕೆಟ್ ‘ಲೆಜೆಂಡ್’ ಶೇನ್ ವಾರ್ನ್​ಗೆ ಸ್ಪೋರ್ಟ್ ಆಸ್ಟ್ರೇಲಿಯಾದಿಂದ ವಿಶೇಷ ಗೌರವ..!

ಫ್ಯಾನ್ಸ್ ಜೊತೆ ಜಗಳಕ್ಕಿಳಿದ ಹಸನ್ ಅಲಿ

ಕ್ರಿಕೆಟ್ ಪಾಕಿಸ್ತಾನದ ವರದಿಯ ಪ್ರಕಾರ, ಹಸನ್ ಅಲಿ ಇತ್ತೀಚೆಗೆ ಪಂಜಾಬ್‌ನ ಆರಿಫ್ವಾಲಾಗೆ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಲು ಆಗಮಿಸಿದ್ದರು. ಪಂದ್ಯದ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಸನ್ ಅಲಿಯನ್ನು ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ಹೀಯಾಳಿಸಲು ಆರಂಭಿಸಿದ್ದಾರೆ. ವಾಸ್ತವವಾಗಿ ಅಲಿಯನ್ನು ಫ್ಯಾನ್ಸ್ ಹೀಯಾಳಿಸಲು ಬಲವಾದ ಕಾರಣವೂ ಇದ್ದು, 2021 ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗೆ ನಿರ್ಣಾಯಕವಾಗಿದ್ದ ಕ್ಯಾಚ್ ಹಿಡಿಯುವಲ್ಲಿ ಅಲಿ ವಿಫಲರಾಗಿದ್ದರು. ಆಸೀಸ್ ಪರ ಅಬ್ಬರದ ಇನ್ನಿಂಗ್ಸ್ ಆಡುತ್ತಿದ್ದ ವೆಡ್ ಅವರ ಸುಲಭ ಕ್ಯಾಚನ್ನು ಅಲಿ ಕೈಚೆಲ್ಲಿದ್ದರು. ಆ ಬಳಿಕ ಉಗ್ರ ರೂಪ ತಾಳಿದ್ದ ವೆಡ್ ಪಾಕ್ ಪರ ವಾಲಿದ್ದ ಗೆಲುವನ್ನು ತಮ್ಮತ್ತ ತಿರುಗಿಸಿಕೊಂಡಿದ್ದರು.

ಅಲಿಯನ್ನು ನಿಂದಿಸಿದ ಪಾಕ್ ಪ್ಯಾನ್ಸ್

ಅಲಿ, ಅದೊಂದು ಕ್ಯಾಚ್ ಬಿಟ್ಟಿದ್ದರಿಂದಲೇ ತಂಡ ಸೋತಿತು ಎಂಬುದು ಪಾಕ್ ಅಭಿಮಾನಿಗಳ ವಾದವಾಗಿದ್ದು, ಈ ನಿಟ್ಟಿನಲ್ಲಿ ಅಲಿಯನ್ನು ಫ್ಯಾನ್ಸ್ ಹೀಯಾಳಿಸಲು ಆರಂಭಿಸಿದ್ದಾರೆ. ಅಲ್ಲದೆ ಆ ಕ್ಯಾಚ್ ಬಿಟ್ಟಿದರಿಂದಲೇ ಅಲಿಯನ್ನು ತಂಡದಿಂದ ಕೈಬಿಡಲಾಗಿದೆ ಎಂದು ಕೆಲವರು ಗೇಲಿ ಮಾಡಿದ್ದಾರೆ. ಈಗಾಗಲೇ ತಂಡದಿಂದ ಹೊರಗಿದ್ದು, ಸಂಕಷ್ಟವನ್ನು ಎದುರಿಸುತ್ತಿರುವ ಅಲಿಗೆ ಅಭಿಮಾನಿಗಳ ಈ ವರ್ತನೆ ಅತಿರೇಕ ಎನಿಸಿದೆ. ಹೀಗಾಗಿ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಲಿ ಕೂಡಲೇ ಹೀಯಾಳಿಸಿದವರ ಬಳಿ ಜಗಳ ಮಾಡಲು ಆರಂಭಿಸಿದ್ದಾರೆ. ಕೂಡಲೇ ಅಲ್ಲಿ ನೆರದಿದ್ದ ಇತರೆ ಪ್ರೇಕ್ಷಕರು ಪರಿಸ್ಥಿತಿ ಕೈಮೀರುವ ಮೊದಲೇ ಈ ಜಗಳನ್ನು ನಿಯಂತ್ರಿಸಿದ್ದಾರೆ. ಈಗ ಈ ಜಗಳದ ವಿಡಿಯೋ ಭಾರೀ ವೈರಲ್ ಆಗಿದ್ದು, ಅಲಿಯ ಈ ವರ್ತನೆಯನ್ನು ಹಲವಾರು ಪಾಕಿಸ್ತಾನಿ ಅಭಿಮಾನಿಗಳು ಖಂಡಿಸಿದ್ದಾರೆ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಹಸನ್ ಅಲಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Mon, 5 December 22