
ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಫೆಬ್ರವರಿ 19 ರಿಂದ ಶುರುವಾಗಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಸೆಮಿಫೈನಲ್ಗೇರುವ ಮೂರು ತಂಡಗಳನ್ನು ಹೆಸರಿಸಿದ್ದಾರೆ ಪಾಕ್ ತಂಡದ ಮಾಜಿ ಆಟಗಾರ ಶೊಯೆಬ್ ಅಖ್ತರ್.
ಶೊಯೆಬ್ ಅಖ್ತರ್ ಪ್ರಕಾರ, ಈ ಬಾರಿ ಏಷ್ಯಾದ ಮೂರು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಅದರಂತೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಮಿಫೈನಲ್ಗೇರುವುದು ಖಚಿತ.
ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-ಎ ನಲ್ಲಿದ್ದು, ಈ ತಂಡಗಳು ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳಿಗೆ ಸೋಲುಣಿಸಿ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ ಎಂದು ಅಖ್ತರ್ ಹೇಳಿದ್ದಾರೆ.
ಇನ್ನು ಗ್ರೂಪ್-ಬಿ ಯಿಂದ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ಗೇರಲಿದೆ. ಈ ಬಾರಿ ಏಷ್ಯಾದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಅಫ್ಘಾನ್ ಪಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.
ಏಕೆಂದರೆ 2023ರ ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ತಂಡವು ಇಂಗ್ಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳಿ ಸೋಲುಣಿಸಿ ಆಘಾತ ನೀಡಿತ್ತು. ಅಂತಹದ್ದೇ ಪ್ರದರ್ಶನವನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲೂ ನಿರೀಕ್ಷಿಸಬಹುದು ಎಂದು ಶೊಯೆಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ.
ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಪಾಕಿಸ್ತಾನ್ ಮತ್ತು ಅಫ್ಘಾನಿಸ್ತಾನ್ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುವುದು ಖಚಿತ ಎಂದು ಶೊಯೆಬ್ ಅಖ್ತರ್ ಹೇಳಿದ್ದಾರೆ. ಇದಾಗ್ಯೂ ನಾಲ್ಕನೇ ಸೆಮಿಫೈನಲ್ಗೇರುವ ನಾಲ್ಕನೇ ತಂಡ ಯಾವುದೆಂದು ಪಾಕ್ ತಂಡದ ಮಾಜಿ ವೇಗಿ ಹೆಸರಿಸಿಲ್ಲ.
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಹೈಬ್ರಿಡ್ ಮಾದರಿಯಲ್ಲಿ ಜರುಗಲಿರುವ ಈ ಟೂರ್ನಿಯ ಬಹುತೇಕ ಮ್ಯಾಚ್ಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ತಂಡದ ಪಂದ್ಯಗಳಿಗೆ ದುಬೈ ಆತಿಥ್ಯವಹಿಸಲಿದೆ.
ಇನ್ನು ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಫೆಬ್ರವರಿ 23 ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಣಸಲಿದೆ.