ಅಭಿಮಾನಿಗಳಿಗೆ ಭಾರಿ ನಿರಾಸೆ; ಭಾರತ- ಪಾಕ್ ನಡುವಿನ ವಿಶ್ವಕಪ್ ಪಂದ್ಯ ರದ್ದು..!

|

Updated on: Jan 08, 2025 | 8:20 PM

Kho Kho World Cup 2025: ಜನವರಿ 13 ರಿಂದ ದೆಹಲಿಯಲ್ಲಿ ನಡೆಯಲಿರುವ ಮೊದಲ ಖೋ-ಖೋ ವಿಶ್ವಕಪ್‌ನಲ್ಲಿ 39 ತಂಡಗಳು ಪಾಲ್ಗೊಳ್ಳಲಿವೆ. ಪಾಕಿಸ್ತಾನ ತಂಡ ವೀಸಾ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದೆ. ಹೀಗಾಗಿ ಭಾರತದ ಮೊದಲ ಪಂದ್ಯ ನೇಪಾಳ ವಿರುದ್ಧ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿದ್ದು, ಫೈನಲ್ ಜನವರಿ 19 ರಂದು ನಡೆಯಲಿದೆ.

ಅಭಿಮಾನಿಗಳಿಗೆ ಭಾರಿ ನಿರಾಸೆ; ಭಾರತ- ಪಾಕ್ ನಡುವಿನ ವಿಶ್ವಕಪ್ ಪಂದ್ಯ ರದ್ದು..!
ಭಾರತ- ಪಾಕಿಸ್ತಾನ
Follow us on

ಚೊಚ್ಚಲ ಆವೃತ್ತಿಯ ಖೋ-ಖೋ ವಿಶ್ವಕಪ್ ಇದೇ ಜನವರಿ 13 ರಿಂದ ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈ ಟೂರ್ನಿಯಲ್ಲಿ ಪುರುಷ ಹಾಗೂ ಮಹಿಳಾ ತಂಡಗಳು ಸೇರಿದಂತೆ ಒಟ್ಟು 39 ತಂಡಗಳು ಭಾಗವಹಿಸಲಿವೆ. ವಾಸ್ತವವಾಗಿ ಈ ಮೊದಲು ಈ ಪಂದ್ಯಾವಳಿಯಲ್ಲಿ 40 ತಂಡಗಳು ಭಾಗವಹಿಸಬೇಕಿತ್ತು. ಆದರೆ ನೆರೆಯ ರಾಷ್ಟ್ರ ಪಾಕಿಸ್ತಾನ ತಂಡ ವೀಸಾ ಸಮಸ್ಯೆಯಿಂದಾಗಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಟೂರ್ನಿಯ ಮೊದಲ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಬೇಕಿತ್ತು. ಆದರೆ ಪಾಕ್ ತಂಡ ಭಾರತಕ್ಕೆ ಬರಲು ಸಾಧ್ಯವಾಗದ ಕಾರಣ ಬೇರೊಂದು ತಂಡದ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಭಾರತಕ್ಕೆ ಬರುತ್ತಿಲ್ಲ ಪಾಕ್ ತಂಡ

ಮಾಧ್ಯಮ ವರದಿಗಳ ಪ್ರಕಾರ, ವೀಸಾ ಪಡೆಯಲು ವಿಳಂಬವಾದ ಕಾರಣ, ಪಾಕಿಸ್ತಾನ ತಂಡವು ನವದೆಹಲಿಯಲ್ಲಿ ನಡೆಯಲಿರುವ ಮೊದಲ ಖೋ-ಖೋ ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಪಾಕಿಸ್ತಾನ ತಂಡಕ್ಕೆ ಇನ್ನೂ ವೀಸಾ ಸಿಕ್ಕಿಲ್ಲ. ಹೀಗಾಗಿ ಭಾರತ ಪುರುಷರ ತಂಡ ತನ್ನ ಮೊದಲ ಪಂದ್ಯವನ್ನು ನೇಪಾಳ ವಿರುದ್ಧ ಜನವರಿ 13 ರಂದು ಆಡಲಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಖೋ ಖೋ ವಿಶ್ವಕಪ್ ಸಿಒಒ ಗೀತಾ ಸುದನ್, ‘ನಾವು ಪಂದ್ಯಾವಳಿಯ ರೂಪುರೇಷೆಯನ್ನು ಸಿದ್ದಪಡಿಸಿದಾಗ ಅದು ಯೋಜನೆಯ ಪ್ರಕಾರ ನಡೆಯುತ್ತದೆ ಎಂದು ನಿರೀಕ್ಷಿಸಿದ್ದೇವು. ಆದರೆ ಇದು ನಿಜವಾಗಿಯೂ ನಮ್ಮ ನಿಯಂತ್ರಣದಲ್ಲಿಲ್ಲ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅವರ ಅರ್ಜಿಯನ್ನು ಅನುಮೋದಿಸಿಲ್ಲ, ಆದ್ದರಿಂದ ಅವರು ಆಡುವ ಸಾಧ್ಯತೆಯಿಲ್ಲ ಎಂದು ತೋರುತ್ತದೆ ಎಂದಿದ್ದಾರೆ.

ಇದೀಗ ಖೋ-ಖೋ ವಿಶ್ವಕಪ್‌ನಲ್ಲಿ ಪುರುಷರ ಪಂದ್ಯಗಳು ಭಾರತ ಮತ್ತು ನೇಪಾಳ ನಡುವಿನ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗಲಿದ್ದು, ಇದು ಭಾರತೀಯ ಕಾಲಮಾನ ರಾತ್ರಿ 8:30 ಕ್ಕೆ ನಡೆಯಲಿದೆ. ಲೀಗ್ ಹಂತದ ಪಂದ್ಯಗಳು ಜನವರಿ 16 ರವರೆಗೆ ನಡೆಯಲಿವೆ. ಇದಾದ ಬಳಿಕ ಜನವರಿ 17ರಿಂದ ಪ್ಲೇಆಫ್ ಪಂದ್ಯಗಳು ಆರಂಭವಾಗಲಿವೆ. ಫೈನಲ್ ಜನವರಿ 19 ರಂದು ಭಾರತೀಯ ಕಾಲಮಾನ ರಾತ್ರಿ 8:15 ಕ್ಕೆ ನಡೆಯಲಿದೆ. ಮತ್ತೊಂದೆಡೆ, ಮಹಿಳೆಯರ ಸ್ಪರ್ಧೆಯಲ್ಲಿ ಒಟ್ಟು 19 ತಂಡಗಳು ಆಡಲಿವೆ.

ಭಾರತ ಈ ತಂಡಗಳನ್ನು ಎದುರಿಸಲಿದೆ

ಪುರುಷರ ಸ್ಪರ್ಧೆಯಲ್ಲಿ 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡದ ಗುಂಪಿನಲ್ಲಿ ನೇಪಾಳ, ಪೆರು, ಬ್ರೆಜಿಲ್ ಮತ್ತು ಭೂತಾನ್ ತಂಡಗಳಿವೆ. ಇವುಗಳಲ್ಲದೆ ದಕ್ಷಿಣ ಆಫ್ರಿಕಾ, ಘಾನಾ, ಅರ್ಜೆಂಟೀನಾ, ನೆದರ್ಲೆಂಡ್ಸ್, ಇರಾನ್, ಬಾಂಗ್ಲಾದೇಶ, ಶ್ರೀಲಂಕಾ, ದಕ್ಷಿಣ ಕೊರಿಯಾ, ಅಮೆರಿಕ, ಪೋಲೆಂಡ್, ಇಂಗ್ಲೆಂಡ್, ಜರ್ಮನಿ, ಮಲೇಷ್ಯಾ, ಆಸ್ಟ್ರೇಲಿಯಾ ಮತ್ತು ಕೀನ್ಯಾ ಕೂಡ ಈ ಟೂರ್ನಿಯ ಭಾಗವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ