
ಮಾಜಿ ಆಟಗಾರರ ಟಿ20 ಲೀಗ್ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯಿಂದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವನ್ನು ಕೈ ಬಿಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರಿಗೆ ಆಡಲು ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಈ ಬಾರಿಯ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಇರುವುದಿಲ್ಲ ಎಂದು ಆಯೋಜಕರು ಖಚಿತಪಡಿಸಿದ್ದಾರೆ.
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಲು ಕಾರಣ ಕಳೆದ 2025ರ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯ ಕಂಡು ಬಂದ ವಿವಾದ. 2025ರಲ್ಲಿ ನಡೆದಿದ್ದ ಟೂರ್ನಿಯ ವೇಳೆ, ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ತಂಡ, ಪಾಕಿಸ್ತಾನ್ ವಿರುದ್ಧದ ಲೀಗ್ ಮತ್ತು ಸೆಮಿಫೈನಲ್ ಪಂದ್ಯಗಳನ್ನು ಆಡಲು ನಿರಾಕರಿಸಿ ವಾಕ್‌ಓವರ್ ನೀಡಿತ್ತು. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಬಾರಿಯ ಸೀಸನ್ನಲ್ಲಿ ಪಾಕಿಸ್ತಾನ್ ತಂಡ ಭಾಗವಹಿಸಲು WCL ಮಂಡಳಿಯು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಜೊತೆ ಮಾತುಕತೆ ನಡೆಸಿತ್ತು. ಆ ವೇಳೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎರಡು ಮುಖ್ಯ ಷರತ್ತುಗಳನ್ನು ಮುಂದಿಟ್ಟಿದ್ದರು…
ಪಾಕಿಸ್ತಾನ ಮಂಡಳಿಯ ವಾಣಿಜ್ಯ ಮತ್ತು ಆರ್ಥಿಕ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದ್ದ WCL ಮ್ಯಾನೇಜ್‌ಮೆಂಟ್, ಭಾರತೀಯ ಆಟಗಾರರ ಕ್ಷಮೆಯಾಚನೆ ಮತ್ತು ಶೇಕ್ ಹ್ಯಾಂಡ್ ಕಡ್ಡಾಯ ನಿಯಮದ ಷರತ್ತುಗಳನ್ನು ನೇರವಾಗಿ ತಿರಸ್ಕರಿಸಿತು. ರಾಜಕೀಯ ಹಾಗೂ ಕ್ರೀಡಾ ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಭಾರತದ ಆಟಗಾರರ ಮೇಲೆ ಇಂತಹ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದರು.
ಅಲ್ಲದೆ ಈ ಎರಡು ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಆಯೋಜಕರು ಖಂಡತುಂಡವಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ಇತ್ತ WCL ಮಂಡಳಿಯು ತನ್ನ ಬೇಡಿಕೆಗಳನ್ನು ತಿರಸ್ಕರಿಸಿದ ತಕ್ಷಣ, ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ಎನ್‌ಒಸಿ ನೀಡದಿರಲು ಅಂತಿಮ ತೀರ್ಮಾನ ತೆಗೆದುಕೊಂಡಿತು.
ಈ ಬೆಳವಣಿಗೆಯ ಬೆನ್ನಲ್ಲೇ, ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಆಯೋಜಕರು ಪಾಕಿಸ್ತಾನ್ ತಂಡವನ್ನು ಟೂರ್ನಿಯಿಂದಲೇ ಅಧಿಕೃತವಾಗಿ ಕೈ ಬಿಟ್ಟಿದ್ದಾರೆ.
ಪಾಕಿಸ್ತಾನದ ನಿರ್ಗಮನದ ಬಳಿಕ WCL ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ಕೆಲವು ಅನಿವಾರ್ಯ ಕಾರಣಗಳಿಂದಾಗಿ ಪಾಕಿಸ್ತಾನ್ ಚಾಂಪಿಯನ್ಸ್ ಈ ಬಾರಿ ಭಾಗವಹಿಸುತ್ತಿಲ್ಲ. ಆದರೆ ಕ್ರೀಡೆ ಮುಂದುವರಿಯಲಿದ್ದು, ಇನ್ನುಳಿದ 6 ತಂಡಗಳೊಂದಿಗೆ ಸೀಸನ್ 3 ಯಶಸ್ವಿಯಾಗಿ ನಡೆಯಲಿದೆ” ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಏನಿದು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ? ಇದರ ನಿಯಮಗಳೇನು ಗೊತ್ತಾ?
ಒಟ್ಟಾರೆಯಾಗಿ ಹೇಳುವುದಾದರೆ, ಕ್ರೀಡಾಂಗಣದ ಒಳಗಿನ ಜಿದ್ದಾಜಿದ್ದಿಗಿಂತ ಹೆಚ್ಚಾಗಿ, ಕ್ರೀಡಾಂಗಣದ ಹೊರಗಿನ ಹಠ ಹಾಗೂ ಭೌಗೋಳಿಕ ರಾಜಕೀಯದ ಎಳೆದಾಟಕ್ಕೆ ಈ ಬಾರಿಯ ಭಾರತ-ಪಾಕಿಸ್ತಾನ್ ಮಹಾಕದನ ಬಲಿಯಾಗಿದೆ. ದುಬೈ ಅಂಗಳದಲ್ಲಿ ಹಳೆಯ ದಿನಗಳ ನೆನಪನ್ನು ಮರುಕಳಿಸಬೇಕಾಗಿದ್ದ ಶಾಹಿದ್ ಅಫ್ರಿದಿ ಹಾಗೂ ಯುವರಾಜ್ ಸಿಂಗ್ ಅವರಂತಹ ದಿಗ್ಗಜರ ಮುಖಾಮುಖಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ PCB ನಿರ್ಧಾರ ತೀವ್ರ ನಿರಾಶೆ ಮೂಡಿಸಿರುವುದಂತೂ ಸುಳ್ಳಲ್ಲ. ಆದಾಗ್ಯೂ, ಪಾಕಿಸ್ತಾನದ ಅನುಪಸ್ಥಿತಿಯಲ್ಲೂ ಇನ್ನುಳಿದ ಆರು ಬಲಿಷ್ಠ ತಂಡಗಳ ನಡುವಿನ ಸರಣಿ ರೋಚಕವಾಗಿ ಮುಂದುವರಿದಿದೆ.