ಪರ್ತ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ Australia vs Pakistan) ತಂಡಕ್ಕೆ ಐಸಿಸಿ (ICC) ಇದೀಗ ಡಬಲ್ ಆಘಾತ ನೀಡಿದೆ. 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಕೋನದಿಂದ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಪಾಕಿಸ್ತಾನಕ್ಕೆ ಅತ್ಯಗತ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಪಾಕ್ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲಾಗಿರಲಿಲ್ಲ. ಇದೀಗ ಸೋಲಿನ ಶಾಕ್ನಲ್ಲಿರುವ ಶಾನ್ ಮಸೂದ್ ಪಡೆಗೆ ಐಸಿಸಿ ದಂಡ ವಿಧಿಸಿರುವುದಲ್ಲದೆ, 2 ಅಂಕಗಳನ್ನು ಸಹ ಕಡಿತಗೊಳಿಸಿದೆ. ಇದರಿಂದಾಗಿ ಪಾಕಿಸ್ತಾನ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.
ಆಸ್ಟ್ರೇಲಿಯಾ ವಿರುದ್ಧ 360 ರನ್‌ಗಳ ಸೋಲಿನ ನಂತರ, ಪಾಕಿಸ್ತಾನ ಡಬ್ಲ್ಯುಟಿಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದರ ಲಾಭ ಪಡೆದ ಭಾರತ ತಂಡ ಮೊದಲ ಸ್ಥಾನಕ್ಕೇರಿತು. ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ತೀವ್ರ ಹೊಡೆತ ಬಿದ್ದಿದೆ. ನಿದಾನಗತಿಯ ಬೌಲಿಂಗ್ ಮಾಡಿದ ಪಾಕಿಸ್ತಾನದ ಆಟಗಾರರಿಗೆ ಐಸಿಸಿ ಪಂದ್ಯ ಶುಲ್ಕದ ಶೇಕಡಾ 10ರಷ್ಟು ದಂಡ ವಿಧಿಸಿದೆ. ಇದಲ್ಲದೆ, ಐಸಿಸಿ ಡಬ್ಲ್ಯುಟಿಸಿ 2025 ರ ಪಾಯಿಂಟ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ 2 ಅಂಕಗಳನ್ನು ಕಡಿಮೆ ಮಾಡಿದೆ.
AUS vs PAK: ಆಸೀಸ್ ಮಾರಕ ದಾಳಿಗೆ ಪಾಕ್ ತತ್ತರ; ಮೊದಲ ಟೆಸ್ಟ್ ಸೋತ ಶಾನ್ ಮಸೂದ್ ಪಡೆ
ಐಸಿಸಿಯ ಈ ಕ್ರಮ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದೆ. ಮೊದಲಿಗೆ ಆಸ್ಟ್ರೇಲಿಯ ವಿರುದ್ಧದ ಸೋಲಿನಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಸೋಲನುಭವಿಸಿದ್ದು, ಇದೀಗ 2 ಪ್ರಮುಖ ಪಾಯಿಂಟ್ಸ್ ಕೂಡ ಕಡಿಮೆಯಾಗಿದೆ. ಈ ಪೆನಾಲ್ಟಿಯೊಂದಿಗೆ, ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನದ ಅಂಕಗಳು ಶೇಕಡಾ 66.67 ರಿಂದ 61.11 ಕ್ಕೆ ಕುಸಿದಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ ತಂಡವು ಒಂದು ಓವರ್‌ಗೆ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡರೆ, ಆ ತಂಡದ ಎಲ್ಲಾ ಆಟಗಾರರಿಗೆ ಪ್ರತಿ ಓವರ್‌ಗೆ ಶೇಕಡಾ 5 ರಂತೆ ದಂಡ ವಿಧಿಸಲಾಗುತ್ತದೆ. ಪಾಕಿಸ್ತಾನ ಎರಡು ಓವರ್‌ಗಳನ್ನು ವಿಳಂಬಗೊಳಿಸಿದ್ದು, ಈ ಕಾರಣದಿಂದಾಗಿ ಆಟಗಾರರಿಗೆ ಶೇಕಡಾ 10 ರಷ್ಟು ದಂಡವನ್ನು ವಿಧಿಸಲಾಗಿದೆ.
ಇದಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರ್ಟಿಕಲ್ 16.11.2 ರ ಪ್ರಕಾರ, ಪ್ರತಿ ತಡವಾದ ಓವರ್‌ಗೆ ಪಾಯಿಂಟ್‌ಗಳ ಪಟ್ಟಿಯಿಂದ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಪಾಕಿಸ್ತಾನ ಎರಡು ಓವರ್‌ಗಳನ್ನು ತಡವಾಗಿ ಬೌಲ್ ಮಾಡಿದ್ದರಿಂದ ಅವರಿಗೆ 2 ಅಂಕಗಳನ್ನು ದಂಡವಾಗಿ ವಿಧಿಸಲಾಗಿದೆ.
ಐಸಿಸಿ ಎಲೈಟ್ ಪ್ಯಾನೆಲ್ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ಸಮಯ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈ ಶಿಕ್ಷೆ ನೀಡಿದ್ದಾರೆ. ಆನ್-ಫೀಲ್ಡ್ ಅಂಪೈರ್‌ಗಳಾದ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಜೋಯಲ್ ವಿಲ್ಸನ್ ಮತ್ತು ಮೂರನೇ ಅಂಪೈರ್ ಮೈಕೆಲ್ ಗೋಫ್ ಮತ್ತು ನಾಲ್ಕನೇ ಅಂಪೈರ್ ಡೊನೊವನ್ ಕೋಚ್ ಅವರು ಪಾಕ್ ತಂಡ ತಡವಾಗಿ ಓವರ್ ಮಾಡಿದೆ ಎಂಬ ಆರೋಪ ಹೊರಿಸಿದ್ದರು. ಇದಾದ ಬಳಿಕ ರೆಫರಿ ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ