
ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam terrorist attack) ನಂತರ ಭಾರತವು ಪ್ರತೀಕಾರದ ಕ್ರಮ ಕೈಗೊಂಡಿರುವುದರಿಂದ ಪಾಕಿಸ್ತಾನದಲ್ಲಿ ಭಯದ ವಾತಾವರಣವಿದೆ. ಭಯ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಈಗ ಪಾಕಿಸ್ತಾನ ಸೂಪರ್ ಲೀಗ್ (PSL) ಪಂದ್ಯಾವಳಿಯನ್ನು ದೇಶದ ಹೊರಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಪಿಎಸ್‌ಎಲ್‌ನ ಉಳಿದ ಪಂದ್ಯಗಳನ್ನು ದುಬೈ ಅಥವಾ ದೋಹಾಗೆ ಸ್ಥಳಾಂತರಿಸಬಹುದು ಎಂಬ ವರದಿಗಳಿವೆ. ಗುರುವಾರ ಮಧ್ಯಾಹ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಈ ವಿಷಯದ ಬಗ್ಗೆ ಚರ್ಚಿಸಿದ್ದರು. ಅಲ್ಲದೆ ಭಾರತದ ದಾಳಿಗೆ ಬೆದರಿರುವ ವಿದೇಶಿ ಆಟಗಾರರು ಈಗಾಗಲೇ ಪಾಕಿಸ್ತಾನವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಅವಮಾನವನ್ನು ತಪ್ಪಿಸಲು ಪಾಕ್ ಕ್ರಿಕೆಟ್ ಮಂಡಳಿ ಲೀಗ್ ಅನ್ನು ಸ್ಥಳಾಂತರಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಮೇಲೆ ಹೇಳಿದಂತೆ ಪಿಎಸ್ಎಲ್‌ನ ಉಳಿದ ಪಂದ್ಯಗಳನ್ನು ವಿದೇಶದಲ್ಲಿ ಆಯೋಜಿಸಲು ಪಾಕ್ ಕ್ರಿಕೆಟ್ ಮಂಡಳಿ ಯೋಜಿಸುತ್ತಿದೆ. ಏಕೆಂದರೆ ಈ ಲೀಗ್ನಲ್ಲಿ ಬಹಳಷ್ಟು ವಿದೇಶಿ ಆಟಗಾರರು ಆಡುತ್ತಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್‌ನ ಅನೇಕ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನ ಭಾಗವಾಗಿದ್ದಾರೆ. ಪಾಕಿಸ್ತಾನದ ಮೇಲೆ ಭಾರತದ ದಾಳಿಗೆ ಬೆದರಿರುವ ಇಂಗ್ಲೆಂಡ್ ಆಟಗಾರರು ಭಯಭೀತರಾಗಿದ್ದು, ಈಗಾಗಲೇ ಇಸಿಬಿಯಿಂದ ಸಹಾಯವನ್ನು ಕೋರಿದ್ದಾರೆ ಎಂಬ ವರದಿಗಳಿವೆ. ಆದರೆ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ದೋಹಾ ಅಥವಾ ದುಬೈಗೆ ಸ್ಥಳಾಂತರಿಸಿದರೆ, ಪಿಸಿಬಿಗೆ ಭಾರಿ ಆರ್ಥಿಕ ನಷ್ಟವಾಗುತ್ತದೆ.
IPL 2025: ಆಪರೇಷನ್ ಸಿಂಧೂರ; ಐಪಿಎಲ್ ಪಂದ್ಯ ಧರ್ಮಶಾಲಾದಿಂದ ಸ್ಥಳಾಂತರ
ಮಂಗಳವಾರ ತಡರಾತ್ರಿ ಪಿಒಕೆ ಮತ್ತು ಪಾಕಿಸ್ತಾನದಲ್ಲಿ ನಡೆದ ವಾಯುದಾಳಿಯ ನಂತರ, ಗುರುವಾರ ಬೆಳಿಗ್ಗೆ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಭಾರತ ಡ್ರೋನ್ ದಾಳಿ ನಡೆಸಿದೆ. ಈ ದಾಳಿಗಳ ನಂತರ ಪಾಕಿಸ್ತಾನದಲ್ಲಿ ಭಯದ ವಾತಾವರಣವಿದೆ. ಗುರುವಾರ ರಾತ್ರಿ ಪಿಎಸ್‌ಎಲ್ ಪಂದ್ಯ ನಡೆಯಬೇಕಿದ್ದ ರಾವಲ್ಪಿಂಡಿ ಕ್ರೀಡಾಂಗಣದಲ್ಲಿಯೂ ಡ್ರೋನ್ ದಾಳಿ ನಡೆದಿದೆ. ಹೀಗಾಗಿ ಈ ದಾಳಿಯ ನಂತರ ಪಂದ್ಯವನ್ನು ಮುಂದೂಡಲಾಗಿದೆ. ಇಷ್ಟೇ ಅಲ್ಲ, ಪಾಕಿಸ್ತಾನ ಸೂಪರ್ ಲೀಗ್‌ನ ಪ್ರತಿಯೊಂದು ಪಂದ್ಯವನ್ನು ಸದ್ಯಕ್ಕೆ ಕರಾಚಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆಯಾದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಸುದ್ದಿಯನ್ನು ಇನ್ನೂ ದೃಢಪಡಿಸಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ