
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ (Pakistan vs New Zealand) ನಡುವಿನ ಟಿ20 ಸರಣಿಗೆ ಶುಭಾರಂಭ ಸಿಕ್ಕಿಲ್ಲ. ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಈ ಸರಣಿಗೆ ಪಾಕಿಸ್ತಾನ ಆತಿಥ್ಯವಹಿಸುತ್ತಿದೆ. ಆದರೆ ರಾವಲ್ಪಿಂಡಿಯಲ್ಲಿ (Rawalpindi) ನಡೆದ ಮೊದಲ ಪಂದ್ಯ ಕೇವಲ ಎರಡೇ ಎರಡು ಎಸೆತಗಳ ನಂತರ ಅಂತ್ಯಗೊಂಡಿದೆ. ವಾಸ್ತವವಾಗಿ ಮಳೆಯಿಂದಾಗಿ ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ಓವರ್ನ ಎರಡನೇ ಎಸೆತದಲ್ಲೇ ಆರಂಭಿಕ ಟಿಮ್ ರಾಬಿನ್ಸನ್ ಅವರ ವಿಕೆಟ್ ಕಳೆದುಕೊಂಡಿತು. ಟಿಮ್ ರಾಬಿನ್ಸನ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಆ ನಂತರ ಮಳೆಯಿಂದಾಗಿ ಇಡೀ ಪಂದ್ಯವನ್ನೇ ನಿಲ್ಲಿಸಬೇಕಾಯಿತು.
ಹವಾಮಾನ ಮುನ್ಸೂಚನೆಯಂತೆ ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸೂಚನೆ ಸಿಕ್ಕಿತು. ಏಕೆಂದರೆ ರಾವಲ್ಪಿಂಡಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿತ್ತು. ಅದರಂತೆ ಪಂದ್ಯದ ದಿನವೂ ಮಳೆ ಎಡಬಿಡದೆ ಸುರಿಯಲಾರಂಭಿಸಿತು. ಹೀಗಾಗಿ ಪಂದ್ಯದ ಟಾಸ್ ಕೂಡ ಅರ್ಧ ಗಂಟೆ ತಡವಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಪಂದ್ಯ ಆರಂಭವಾಗಿ ಎರಡು ಎಸೆತಗಳು ಮುಗಿಯುವ ವೇಳೆಗೆ ಮಳೆ ಬಂದು ಪಂದ್ಯ ರದ್ದಾಯಿತು.
2 ಎಸೆತಗಳ ಬಳಿಕ ನಿಂತ ಪಂದ್ಯ ಸತತ ಮಳೆಯಿಂದಾಗಿ ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಅಂದರೆ ಪಂದ್ಯ ಅನಿರ್ದಿಷ್ಟವಾಗಿ ಕೊನೆಗೊಂಡಿತು. ಆದರೆ ಉಭಯ ತಂಡಗಳ ನಡುವಿನ ಈ ಕದನ ಹಲವು ಯುವ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಮಾಡಿಕೊಟ್ಟಿತು. ಈ ಪಂದ್ಯದಲ್ಲಿ ಆಡಿದ ಚೆಂಡುಗಳ ಸಂಖ್ಯೆಗಿಂತ ಹೆಚ್ಚಿನ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಕಿವೀಸ್ ಪರ ಟಿಮ್ ರಾಬಿನ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟರೆ, ಪಾಕಿಸ್ತಾನ ಪರ ಉಸ್ಮಾನ್ ಖಾನ್, ಇರ್ಫಾನ್ ಖಾನ್ ಮತ್ತು ಅಬ್ರಾರ್ ಅಹ್ಮದ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ನ್ಯೂಜಿಲೆಂಡ್ ತಂಡ: ಟಿಮ್ ಸೀಫರ್ಟ್, ಟಿಮ್ ರಾಬಿನ್ಸನ್, ಡೀನ್ ಫಾಕ್ಸ್‌ಕ್ರಾಫ್ಟ್, ಮಾರ್ಕ್ ಚಾಪ್‌ಮನ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್‌ವೆಲ್ (ನಾಯಕ), ಜೋಶ್ ಕ್ಲಾರ್ಕ್‌ಸನ್, ಇಶ್ ಸೋಧಿ, ಜಾಕೋಬ್ ಡಫ್ಫಿ, ಬೆನ್ ಸಿಯರ್ಸ್, ಬೆಂಜಮಿನ್ ಲಿಸ್ಟರ್.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಸೈಮ್ ಅಯೂಬ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್, ಇಫ್ತಿಕರ್ ಅಹ್ಮದ್, ಇರ್ಫಾನ್ ಖಾನ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಅಬ್ರಾರ್ ಅಹ್ಮದ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Fri, 19 April 24