ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ICC World Cup) ಚಾಲನೆ ದೊರಕಿದ್ದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಇಂದು ದ್ವಿತೀಯ ಪಂದ್ಯ ನಡೆಯಲಿದ್ದು ಬಾಬರ್ ಅಝಂ ನಾಯಕತ್ವದ ಪಾಕಿಸ್ತಾನ ಹಾಗೂ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ ತಂಡ ಮುಖಾಮುಖಿ ಆಗಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯದಲ್ಲಿ ಎರಡೂ ಮ್ಯಾಚ್ ಸೋತಿರುವ ಪಾಕ್ಗೆ ಯಾವರೀತಿ ಪ್ರದರ್ಶನ ತೋರುತ್ತೆ ಎಂಬುದು ನೋಡಬೇಕಿದೆ.
ಪಾಕಿಸ್ತಾನ ತಂಡ ಭಾರತಕ್ಕೆ ಕಾಲಿಟ್ಟ ಬಳಿಕ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಆದರೆ, ಆಡಿದ ಎರಡೂ ವಾರ್ಮ್ ಅಪ್ ಮ್ಯಾಚ್ನಲ್ಲಿ ಸೋಲುಂಡಿತ್ತು. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಅಲ್ಲದೆ ಬಾಬರ್ ಪಡೆ ಏಷ್ಯಾಕಪ್ ಫೈನಲ್ಗೆ ತಲುಪುವಲ್ಲೂ ವಿಫಲವಾಗಿತ್ತು. ಮೇಲ್ನೋಟಕ್ಕೆ ಪಾಕ್ ಬಲಿಷ್ಠವಾಗಿದ್ದರೂ ಆಟಗಾರರು ಫಾರ್ಮ್ ಕೊರತೆ ಅನುಭವಿಸುತ್ತಿದ್ದಾರೆ. ಬಾಬರ್, ಇಮಾಮ್ ಉಲ್ ಹಖ್, ಫಖರ್ ಜಮಾನ್, ರಿಜ್ವಾನ್, ಹಸನ್ ಅಲಿ, ಶಾಹಿನ್ ಅಫ್ರಿದಿ ಮೇಲೆ ಎಲ್ಲರ ಕಣ್ಣಿದೆ.
ವಿಶ್ವ ಚಾಂಪಿಯನ್ನರಿಗೆ ಮುಖಭಂಗ: ನ್ಯೂಝಿಲೆಂಡ್ಗೆ ಭರ್ಜರಿ ಜಯ
ಇತ್ತ ನೆದರ್ಲೆಂಡ್ಸ್ ತಂಡ ಈ ವರ್ಷ ಜುಲೈನಲ್ಲಿ ಜಿಂಬಾಬ್ವೆಯಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಗೆದ್ದು ಸ್ಪರ್ಧೆಗೆ ಬಂದಿದೆ. ಸ್ಕಾಟ್ ಎಡ್ವರ್ಡ್ಸ್ ಅವರು ವಿಶ್ವಕಪ್ 2023 ಮಿಷನ್‌ನಲ್ಲಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ವೆಸ್ಲಿ ಬ್ಯಾರೆಸಿ, ರೋಲೋಫ್ ವ್ಯಾನ್ ಡೆರ್ ಮೆರ್ವೆ, ವಿಕ್ರಮಜಿತ್ ಸಿಂಗ್, ಆರ್ಯನ್ ದತ್ ಹೀಗೆ ಕೆಲ ಸ್ಟಾರ್ ಆಟಗಾರರು ತಂಡದಲ್ಲಿದ್ದಾರೆ. ಬಾಸ್ ಡಿ ಲೀಡೆ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಬ್ಯಾಟ್ ಮತ್ತು ಬಾಲ್‌ನಲ್ಲಿ 23 ವರ್ಷ ವಯಸ್ಸಿನ ಈ ಆಟಗಾರ ಪರಿಣಾಮಕಾರಿ ಆಗುವ ಸಾಧ್ಯತೆ ಇದೆ.
ಒಡಿಐ ಮಾದರಿಯಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವೆ ಒಟ್ಟು ಆರು ಪಂದ್ಯಗಳು ನಡೆದಿವೆ. ಪಾಕಿಸ್ತಾನ ಎಲ್ಲಾ ಆರು ಪಂದ್ಯಗಳನ್ನು ಗೆದ್ದಿದ್ದರೆ, ನೆದರ್ಲೆಂಡ್ಸ್ ತಂಡ ಪಾಕಿಸ್ತಾನದ ವಿರುದ್ಧ ಯಾವುದೇ ಪಂದ್ಯವನ್ನು ಗೆದ್ದಿಲ್ಲ. ಇನ್ನು ಈ ಪಂದ್ಯಕ್ಕೆ ಹೈದರಾಬಾದ್‌ನಲ್ಲಿ ಮಳೆ ಸಂಭವವಿಲ್ಲ. ಭಾಗಶಃ ಮೋಡ ಕವಿದ ವಾತಾವರಣವಿದ್ದು, ಆಟದ ಸಮಯದಲ್ಲಿ ತಾಪಮಾನವು 26°C-28°C ನಡುವೆ ಇರುತ್ತದೆ. ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ವರ್ಗವಾಗಿದೆ. ವೇಗಿಗಳಿಗೆ ಕೊಂಚ್ ಸಹಾಯವಾಗಲಿದೆ.
ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ IST ಕ್ಕೆ ಆರಂಭವಾಗಲಿದೆ. ಇದನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಡಿಜಿಟಲ್ ಆಗಿ ಸ್ಟ್ರೀಮ್ ಮಾಡಲಾಗುತ್ತದೆ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಂ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ.
ನೆದರ್ಲೆಂಡ್ಸ್ ತಂಡ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಬಾಸ್ ಡಿ ಲೀಡೆ, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ತೇಜಾ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ರೋಲೋಫ್ ವ್ಯಾನ್ ಡಿ ಮೆರ್ವೆ, ಲೋಗನ್ ವ್ಯಾನ್ ಬೀಕ್, ಪಾಲ್ ವ್ಯಾನ್ ಮೀಕೆರೆನ್, ಆರ್ಯನ್ ದತ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ