
ಐಸಿಸಿ (ICC) ಟೂರ್ನಿಗಳಲ್ಲಿ ಪಾಕಿಸ್ತಾನ ತಂಡಗಳು ಕಳಪೆ ಪ್ರದರ್ಶನ ನೀಡುತ್ತಲೇ ಇವೆ. ಚಾಂಪಿಯನ್ಸ್ ಟ್ರೋಫಿಯಿಂದ ಹಿಡಿದು ವಿಶ್ವಕಪ್ (World Cup 2025) ಮತ್ತು ಟಿ20 ವಿಶ್ವಕಪ್‌ವರೆಗೆ, ಪುರುಷರ ತಂಡವು ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ. ಮಹಿಳಾ ತಂಡವೂ ಇದಕ್ಕೆ ಹೊರತಾಗಿಲ್ಲ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ 2025 ರ (Women’s ODI World Cup 2025) ಲೀಗ್ ಹಂತದಿಂದಲೇ ಪಾಕಿಸ್ತಾನ ತಂಡ ತನ್ನ ಪ್ರಯಾಣ ಕೊನೆಗೊಳಿಸಿದೆ. ಫಾತಿಮಾ ಸನಾ ನಾಯಕತ್ವದ ತಂಡವು ಸೋತಿದ್ದಲ್ಲದೆ, ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿದೆ.
ಸೆಮಿಫೈನಲ್ ರೇಸ್ನಿಂದ ಈಗಾಗಲೇ ಹೊರಬಿದ್ದಿದ್ದ ಪಾಕಿಸ್ತಾನ ತಂಡ ಕೊನೆಯ ಲೀಗ್ ಪಂದ್ಯದಲ್ಲಾದರೂ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಅಕ್ಟೋಬರ್ 24 ರ ಶುಕ್ರವಾರ ಕೊಲಂಬೊದಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಕೇವಲ 4.2 ಓವರ್ಗಳ ನಂತರ ಮಳೆಯಿಂದಾಗಿ ರದ್ದುಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 18 ರನ್ ಗಳಿಸಿತ್ತು. ಆದರೆ ಆ ಬಳಿಕ ಮಳೆ ಬಂದ ಕಾರಣದಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಈ ಫಲಿತಾಂಶದೊಂದಿಗೆ ಪಾಕಿಸ್ತಾನ, ಪಂದ್ಯಾವಳಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದೆ ಟೂರ್ನಿಯಿಂದ ಹೊರಬಿತ್ತು. ಈ 7 ಪಂದ್ಯಗಳಲ್ಲಿ ಪಾಕ್ ತಂಡವು ನಾಲ್ಕು ಪಂದ್ಯಗಳನ್ನು ಸೋತರೆ, ಉಳಿದ ಮೂರು ಪಂದ್ಯಗಳು ಮಳೆಯಿಂದಾಗಿ ರದ್ದಾದವು. ಇದೇ ಕಾರಣಕ್ಕೆ ಪಾಕಿಸ್ತಾನಕ್ಕೆ ಮೂರು ಅಂಕಗಳು ಸಿಕ್ಕವು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಪಾಕ್ ತಂಡ 7 ನೇ ಸ್ಥಾನ ಪಡೆದುಕೊಂಡಿತು.
ಏಕದಿನ ವಿಶ್ವಕಪ್ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿತು. ಆದ್ದರಿಂದ, ಪಾಕ್ ತಂಡದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಆಡಿಸಲಾಯಿತು. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿಯೇ ಬಾಂಗ್ಲಾದೇಶದ ವಿರುದ್ಧ ಸೋತಿತು. ನಂತರ ಟೀಂ ಇಂಡಿಯಾ, ಪಾಕಿಸ್ತಾನವನ್ನು ಮಣಿಸಿತ್ತು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧವೂ ಹೀನಾಯ ಸೋಲನ್ನು ಅನುಭವಿಸಿತು. ಆ ಬಳಿಕ ಮಳೆಯ ಕಾರಣಗಳಿಂದಾಗಿ ಕೆಲವು ಪಂದ್ಯಗಳನ್ನು ರದ್ದುಗೊಳಿಸಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ