ಡಿಸೆಂಬರ್ 26 ರಿಂದ ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಸೆಂಚುರಿಯನ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಭಾರತ ತಂಡದ ಮುಖ್ಯ ಕೋಚ್ ನಿರ್ಧಾರವನ್ನು ಇದೀಗ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಪ್ರಶ್ನಿಸಿದ್ದಾರೆ.
ಭಾರತದ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುವ ಆಟಗಾರ ರಣಜಿ ಟ್ರೋಫಿ ಅಥವಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಕೀಪಿಂಗ್ ಮಾಡುವವರಾಗಿರಬೇಕು. ಆದರೆ ಇದೀಗ ಏಕಾಏಕಿ ಕೆಎಲ್ ರಾಹುಲ್ ಅವರನ್ನು ಟೆಸ್ಟ್ ತಂಡದ ವಿಕೆಟ್ ಕೀಪರ್ ಮಾಡಲಾಗಿದೆ. ನಿಜಕ್ಕೂ ಇದು ಅಚ್ಚರಿಯ ನಡೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಎಸ್ ಭರತ್ ಇದ್ದಾರೆ. ಇದಾಗ್ಯೂ ಟೆಸ್ಟ್ನಲ್ಲಿ ಕೀಪಿಂಗ್ ಮಾಡಿರದ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಎಂದು ದ್ರಾವಿಡ್ ಘೋಷಿಸಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎಂದು ಪಾರ್ಥಿವ್ ಪಟೇಲ್ ತಿಳಿಸಿದ್ದಾರೆ.
ಈ ಹಿಂದೆ ಕೆಎಲ್ ರಾಹುಲ್ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದರು. ಆದರೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 90 ಓವರ್ಗಳ ಕಾಲ ವಿಕೆಟ್ ಕೀಪಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ನಡೆಯನ್ನು ಪಾರ್ಥಿವ್ ಪಟೇಲ್ ಪ್ರಶ್ನಿಸಿದ್ದು, ತಂಡದಲ್ಲಿ ವಿಕೆಟ್ ಕೀಪರ್ ಇದ್ದರೂ ಅವರನ್ನು ಬೆಂಚ್ನಲ್ಲಿ ಕೂರಿಸಿ, ದೀರ್ಘಾವಧಿ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡದವರಿಗೆ ಕೀಪಿಂಗ್ ಗ್ಲೌಸ್ ತೊಡಿಸುವುದು ಸರಿಯಾದ ನಡೆಯಲ್ಲ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿಯು ನಾಳೆಯಿಂದ (ಡಿ.26) ಶುರುವಾಗಲಿದೆ. ಎರಡು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಸೆಂಚುರಿಯನ್ನಲ್ಲಿ ನಡೆಯಲಿದೆ. ಇನ್ನು ದ್ವಿತೀಯ ಟೆಸ್ಟ್ ಪಂದ್ಯವು ಜನವರಿ 3 ರಿಂದ ಕೇಪ್ಟೌನ್ನಲ್ಲಿ ಶುರುವಾಗಲಿದೆ.
ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಈಶ್ವರನ್.