ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ದೇಶೀಯ ಟೂರ್ನಿ ಆಡುವ ಆಟಗಾರರ ವೇತನವನ್ನು ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ಇದೀಗ ರಾಷ್ಟ್ರೀಯ ತಂಡದ ಆಟಗಾರರಿಗೆ ದಂಡದ ಶಿಕ್ಷೆ ನೀಡಿದೆ.
ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಅಕ್ಟೋಬರ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧದ ಮುಲ್ತಾನ್ ಟೆಸ್ಟ್ನಿಂದ ಸೌತ್ ಆಫ್ರಿಕಾ ಸರಣಿಯವರೆಗೆ, ಪಿಸಿಬಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ 33 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಪಾಕಿಸ್ತಾನ್ ತಂಡದ ಯುವ ಆರಂಭಿಕ ಆಟಗಾರ ಸೈಮ್ ಅಯ್ಯೂಬ್, ಉಪನಾಯಕ ಸಲ್ಮಾನ್ ಅಲಿ ಅಘಾ ಅಬ್ದುಲ್ಲಾ ಶಫೀಕ್ ಅವರಿಗೆ 5 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಶಿಸ್ತಿನ ನಡೆ.
ಈ ಮೂವರು ಆಟಗಾರರು ಆಸ್ಟ್ರೇಲಿಯಾ ಸರಣಿಯ ವೇಳೆ ತಡರಾತ್ರಿ ಹೋಟೆಲ್‌ಗೆ ತಲುಪಿದ್ದರು. ಇದಕ್ಕಾಗಿ ಈ ಮೂವರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಲಾ 5 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಹಾಗೆಯೇ ಸೌತ್ ಆಫ್ರಿಕಾ ವಿರುದ್ಧದ ಸರಣಿ ವೇಳೆ ಕೆಲವು ಆಟಗಾರರು ರಾತ್ರಿ 2 ನಿಮಿಷ ತಡವಾಗಿ ಹೋಟೆಲ್ ತಲುಪಿದ್ದರು. ಹೀಗಾಗಿ ಸೂಫಿಯಾನ್ ಮುಖೀಮ್, ಉಸ್ಮಾನ್ ಖಾನ್, ಅಬ್ಬಾಸ್ ಅಫ್ರಿದಿ ಅವರಿಗೆ 18 ಸಾವಿರ ರೂ. (200 ಡಾಲರ್) ದಂಡ ವಿಧಿಸಿದ್ದಾರೆ.
ಪಾಕಿಸ್ತಾನ್ ತಂಡದ ವೇಗಿ ಬೌಲರ್ ಅಮಿರ್ ಜಮಾಲ್ ವಿರುದ್ಧ ಕೂಡ ಪಾಕ್ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳೆ ಅಮಿರ್ ಜಮಾಲ್ ‘ಖೈದಿ ಸಂಖ್ಯೆ 804’ ಎಂದು ಬರೆದಿರುವ ಕ್ಯಾಪ್ ಧರಿಸಿದ್ದರು. ಈ ಮೂಲಕ ಅವರು ಜೈಲಿನಲ್ಲಿರುವ ಪಾಕಿಸ್ತಾನ್ ತಂಡದ ಮಾಜಿ ನಾಯಕ ಮತ್ತು ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿದ್ದರು. ಇದಕ್ಕಾಗಿ ಅಮಿರ್ ಜಮಾಲ್ಗೆ ಬರೋಬ್ಬರಿ 14 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
ಒಟ್ಟಿನಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭದಿಂದ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇದೀಗ ವೇತನ ಕಡಿತ ಹಾಗೂ ದಂಡದ ಶಿಕ್ಷೆಯೊಂದಿಗೆ ಸಖತ್ ಸುದ್ದಿಯಾಗುತ್ತಿದ್ದಾರೆ.