ಭಾರತ vs ಪಾಕಿಸ್ತಾನ್ ಪಂದ್ಯ ರದ್ದಾದ್ರೆ ಯಾರಿಗೆ ನಷ್ಟ? ಹೀಗಿದೆ ಲೆಕ್ಕಾಚಾರ

T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳನ್ನು ನಾಲ್ಕು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಗ್ರೂಪ್-1 ರಲ್ಲಿ ಸ್ಥಾನ ಪಡೆದಿರುವ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗುವುದು ಅನುಮಾನ ಎನ್ನಲಾಗುತ್ತಿದೆ.

ಭಾರತ vs ಪಾಕಿಸ್ತಾನ್ ಪಂದ್ಯ ರದ್ದಾದ್ರೆ ಯಾರಿಗೆ ನಷ್ಟ? ಹೀಗಿದೆ ಲೆಕ್ಕಾಚಾರ
Ind Vs Pak

Updated on: Jan 27, 2026 | 1:54 PM

ಟಿ20 ವಿಶ್ವಕಪ್​ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳಲ್ಲಿ ಪಾಕಿಸ್ತಾನ್ ಕೂಡ ಒಂದು. ಆದರೆ ಇದೀಗ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ ಪಂದ್ಯದಿಂದ ಹಿಂದೆ ಸರಿಯುವ ಸೂಚನೆ ನೀಡಿದೆ.

ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದೆ. ಈ ಮೂಲಕ ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಹೊರಗಿಟ್ಟಿರುವುದನ್ನು ಖಂಡಿಸಲು ಪಿಸಿಬಿ ಯೋಜನೆ ಹಾಕಿಕೊಂಡಿದೆ.

ಒಂದು ವೇಳೆ ಪಾಕಿಸ್ತಾನ್ ತಂಡವು ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿದರೆ ಯಾರಿಗೆ ನಷ್ಟ? ಎಂಬ ಪ್ರಶ್ನೆಯೊಂದು ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ…

  1.  ಪಾಕಿಸ್ತಾನ ತಂಡವು ಭಾರತದ ವಿರುದ್ಧ ಪಂದ್ಯವನ್ನು ಆಡದಿದ್ದರೆ, ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ಅದರ ವಿರುದ್ಧ ಕ್ರಮ ಕೈಗೊಳ್ಳಬಹುದು. ಏಕೆಂದರೆ ಪ್ರತಿ ಪಂದ್ಯಾವಳಿಯ ಆರಂಭದ ಮೊದಲು, ಐಸಿಸಿ ಮತ್ತು ಭಾಗವಹಿಸುವ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಅಂದರೆ ಪಂದ್ಯದಿಂದ ಹಿಂದೆ ಸರಿಯುವುದು ಐಸಿಸಿ ನಿಯಮದ ಉಲ್ಲಂಘನೆಯಾಗಲಿದೆ. ಹೀಗಾಗಿ ಐಸಿಸಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲು ಅವಕಾಶ ದೊರೆಯಲಿದೆ.
  2. ಒಂದು ವೇಳೆ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ ಕಣಕ್ಕಿಳಿಯದಿದ್ದರೆ, ಐಸಿಸಿ ನಿಯಮ ಉಲ್ಲಂಘನೆಯ ಕಾರಣ ಪಾಕ್ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಹಾಕಬಹುದು.
  3. ಐಸಿಸಿಯ ಆದಾಯ ಹಂಚಿಕೆ ಮಾದರಿಯಡಿಯಲ್ಲಿ, ಪಾಕಿಸ್ತಾನವು ವಾರ್ಷಿಕವಾಗಿ $34 ಮಿಲಿಯನ್ ಅಥವಾ ಸರಿಸುಮಾರು 311 ಕೋಟಿ ರೂಪಾಯಿಗಳನ್ನು (INR) ಪಡೆಯುತ್ತದೆ. ಒಂದು ವೇಳೆ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಿದರೆ ಈ ಆದಾಯದ ಸಂಪೂರ್ಣ ಅಥವಾ ಗಣನೀಯ ಭಾಗವನ್ನು ಪಾಕಿಸ್ತಾನ್ ಕಳೆದುಕೊಳ್ಳಲಿದೆ.
  4. ಐಸಿಸಿ ನಿಯಮ ಉಲ್ಲಂಘಿಸಿದ ಕಾರಣ ಪಾಕಿಸ್ತಾನ್ ತಂಡವನ್ನು ಮುಂಬರುವ ಕೆಲ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸದಂತೆ ನಿಷೇಧಿಸಬಹುದು.
  5. ಪಂದ್ಯ ಅಥವಾ ಟೂರ್ನಮೆಂಟ್ ಬಹಿಷ್ಕರಿಸಿದರೆ ಐಸಿಸಿ ಸುಮಾರು $2 ಮಿಲಿಯನ್ (₹16 ಕೋಟಿಗಿಂತ ಹೆಚ್ಚು) ವರೆಗೆ ಪಾಕಿಸ್ತಾನ್ನ ತಂಡಕ್ಕೆ ದಂಡ ವಿಧಿಸಬಹುದು.
  6. ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಸಿಗುವ $500,000 ಪ್ರವೇಶ ಶುಲ್ಕವನ್ನು ಪಿಸಿಬಿ ಕಳೆದುಕೊಳ್ಳಲಿದೆ.
  7. ಬಹಿಷ್ಕಾರದ ನಿರ್ಧಾರವು ಪಿಸಿಬಿ ಮತ್ತು ಐಸಿಸಿ ನಡುವಿನ ಸಂಬಂಧವನ್ನು ಕೆಡಿಸುತ್ತದೆ. ಇದರಿಂದ ವಿದೇಶಿ ಆಟಗಾರರಿಗೆ ಪಾಕಿಸ್ತಾನದಲ್ಲಿ ಆಡಲು ಐಸಿಸಿ ಅನುಮತಿ (NOC) ನೀಡದೆ ಇರಬಹುದು. ಇದರಿಂದ ಪಿಎಸ್ಎಲ್ ಬ್ರ್ಯಾಂಡ್ ಮೌಲ್ಯ ಕೂಡ ಕುಸಿಯಲಿದೆ.
  8. ಐಸಿಸಿ ನಿಯಮಗಳ ಉಲ್ಲಂಘನೆಯಿಂದಾಗಿ ಪಾಕಿಸ್ತಾನವನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಬಹುದು. ಇದರಿಂದ ಮುಂದಿನ ದ್ವಿಪಕ್ಷೀಯ ಸರಣಿಗಳು ಮತ್ತು ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ಭಾಗವಹಿಸಲು ಅಡ್ಡಿಯಾಗಬಹುದು.
  9.  ಐಸಿಸಿ ನಿಯಮ ಉಲ್ಲಂಘಿಸಿದ ಪರಿಣಾಮ 2028ರ ಮಹಿಳಾ ಟಿ20 ವಿಶ್ವಕಪ್‌ನಂತಹ ಭವಿಷ್ಯದ ಟೂರ್ನಿಗಳನ್ನು ಆಯೋಜಿಸುವ ಹಕ್ಕನ್ನು ಪಾಕಿಸ್ತಾನ ಕಳೆದುಕೊಳ್ಳಲಿದೆ.
  10. ಪಾಕಿಸ್ತಾನದ ಈ ನಡೆಯನ್ನು ಇತರೆ ಮಂಡಳಿಗಳೂ ಕೂಡ ಖಂಡಿಸಿದರೆ, ಕೆಲ ವರ್ಷಗಳ ಕಾಲ ಪಾಕ್ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧಿಸುವ ಅವಕಾಶ ಕೂಡ ಐಸಿಸಿ ಮುಂದಿರಲಿದೆ.

ಇದನ್ನೂ ಓದಿ: ಸತತ ಸೋಲು… RCBಗೆ ನೇರವಾಗಿ ಫೈನಲ್​ಗೇರಲು ಇರೋದು ಇದೊಂದೇ ದಾರಿ

ಅಂದರೆ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ್ ಬಹಿಷ್ಕರಿಸಿದರೆ ಭಾರೀ ನಷ್ಟ ಅನುಭವಿಸಲಿದೆ. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಪಿಸಿಬಿ ತನ್ನ ಮುಂದಿನ ಸಭೆಯಲ್ಲಿ ಭಂಡ ನಿರ್ಧಾರ ತೆಗೆದುಕೊಳ್ಳಲಿದೆಯಾ ಎಂಬುದೇ ಈಗ ಕುತೂಹಲ.

Published On - 1:54 pm, Tue, 27 January 26