ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಇದುವರೆಗೆ ಇಂಗ್ಲೆಂಡ್ ತಂಡಕ್ಕೆ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಆಡಿರುವ ಎರಡೂ ಪಂದ್ಯಗಳಲ್ಲು ಆಂಗ್ಲ ಪಡೆ ಸೋಲನುಭವಿಸಿದೆ. ತಂಡದ ಈ ಸೋಲಿನಲ್ಲಿ ಬ್ಯಾಟಿಂಗ್ ವಿಭಾಗದ ಕೊಡುಗೆಯೆ ಹೆಚ್ಚಿದೆ. ಅದರಲ್ಲೂ ಆರಂಭಿಕರಿಬ್ಬರು ಕೂಡ ಆಡಿರುವ ಮೂರು ಪಂದ್ಯಗಳಲ್ಲಿ ಒಮ್ಮೆಯೂ ಎರಡಂಕಿ ಮೊತ್ತದ ಜೊತೆಯಾಟ ನೀಡಿಲ್ಲ. ಇದು ಒಂದೆಡೆ ಆಂಗ್ಲ ಪಡೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರೆ, ಮತ್ತೊಂದೆಡೆ ಐಪಿಎಲ್ ತಂಡ ಆರ್ಸಿಬಿಗೂ ತಲೆನೋವು ಹೆಚ್ಚಾಗಿದೆ. ಏಕೆಂದರೆ ಆಂಗ್ಲ ತಂಡದ ಆರಂಭಿಕರ ವೈಫಲ್ಯದಲ್ಲಿ ಫಿಲ್ ಸಾಲ್ಟ್ ಅವರ ಕೊಡುಗೆಯೇ ಅಪಾರವಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಸಾಲ್ಟ್ ಒಂದು ಪಂದ್ಯದಲ್ಲೂ ಒಂದಂಕಿ ಮೊತ್ತ ದಾಟಿಲ್ಲ.
ವಾಸ್ತವವಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಗ್ಲೆಂಡ್‌ನ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್‌ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿತ್ತು. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಫಿಲ್ ಸಾಲ್ಟ್ ಖರೀದಿಗಾಗಿ ಆಸಕ್ತಿ ತೋರಿಸಿದವು. ಆದರೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 11.50 ಕೋಟಿ ನೀಡುವ ಮೂಲಕ ಸಾಲ್ಟ್ರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಫಿಲ್ ಸಾಲ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾದಾಗಿನಿಂದ ಇದುವರೆಗೆ 11 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಒಂದೇ ಬಾರಿ 50 ರನ್ ಗಡಿ ದಾಟುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ಈ ಸರಣಿಯಲ್ಲಿ ಫಿಲ್ ಸಾಲ್ಟ್‌ಗೆ ಮೊದಲ 3 ಪಂದ್ಯಗಳಲ್ಲಿ ಒಮ್ಮೆಯೂ ಎರಡಂಕಿ ಮುಟ್ಟಲು ಸಾಧ್ಯವಾಗಿಲ್ಲ. ಈ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 3 ಎಸೆತಗಳನ್ನು ಆಡಿ ಖಾತೆ ತೆರೆಯದೆ ಔಟಾಗಿದ್ದರು. ಎರಡನೇ ಪಂದ್ಯದಲ್ಲೂ 3 ಎಸೆತಗಳಲ್ಲಿ ಕೇವಲ 4 ರನ್ಗಳಿಗೆ ಸುಸ್ತಾಗಿದ್ದ ಸಾಲ್ಟ್, ಈಗ ರಾಜ್‌ಕೋಟ್‌ನಲ್ಲೂ 7 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಐಪಿಎಲ್ 2025 ರ ಮೆಗಾ ಹರಾಜಿನ ನಂತರ, ಫಿಲ್ ಸಾಲ್ಟ್ ಒಟ್ಟು 11 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 8 ಪಂದ್ಯಗಳಲ್ಲಿ ಎರಡಂಕಿ ಮುಟ್ಟಲು ಸಾಧ್ಯವಾಗದೆ ಎರಡು ಬಾರಿ ಖಾತೆ ತೆರೆಯದೆ ಔಟಾಗಿದ್ದಾರೆ. ಉಳಿದ ಮೂರು ಪಂದ್ಯಗಳಲ್ಲಿ ಅವರು ಔಟಾಗದೆ 43, 13 ರನ್ ಮತ್ತು 71 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಫಿಲ್ ಸಾಲ್ಟ್ ಕಳೆದ ಐಪಿಎಲ್ ಸೀಸನ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 435 ರನ್ ಗಳಿಸಿದ್ದರು. ಈ ಅಮೋಘ ಪ್ರದರ್ಶನ ಕಂಡ ಆರ್‌ಸಿಬಿ ಅವರನ್ನು ಭಾರಿ ಮೊತ್ತ ನೀಡಿ ಖರೀದಿಸಿತು. ಆದರೆ ಅವರ ಕಳಪೆ ಫಾರ್ಮ್ ಪ್ರಸ್ತುತ ಆರ್‌ಸಿಬಿಗೆ ಆತಂಕ ಪಡುವಂತೆ ಮಾಡಿದೆ.