AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ವರುಣ್, ಹಾರ್ದಿಕ್ ಹೋರಾಟ ವ್ಯರ್ಥ; ಭಾರತಕ್ಕೆ 26 ರನ್ ಸೋಲು

IND vs ENG: ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 26 ರನ್‌ಗಳಿಂದ ಸೋಲಿಸಿ ಸರಣಿಯನ್ನು 2-1 ಅಂತರದಿಂದ ಜೀವಂತವಾಗಿರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 171 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಭಾರತ 145 ರನ್‌ಗಳಿಸಲಷ್ಟೇ ಶಕ್ತವಾಯಿತು. ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರೂ, ಭಾರತದ ಬ್ಯಾಟಿಂಗ್ ದುರ್ಬಲವಾಗಿತ್ತು. ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಮತ್ತೆ ನಿರಾಸೆ ಮೂಡಿಸಿದರು.

IND vs ENG: ವರುಣ್, ಹಾರ್ದಿಕ್ ಹೋರಾಟ ವ್ಯರ್ಥ; ಭಾರತಕ್ಕೆ 26 ರನ್ ಸೋಲು
ಭಾರತ- ಇಂಗ್ಲೆಂಡ್
ಪೃಥ್ವಿಶಂಕರ
|

Updated on: Jan 28, 2025 | 10:53 PM

Share

ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾವನ್ನು 26 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಸರಣಿಯನ್ನು 1-2 ಅಂತರದಿಂದ ಜೀವಂತವಾಗಿರಿಸಿದೆ. ಬುಧವಾರ ರಾಜ್‌ಕೋಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 171 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ಕಳೆದುಕೊಂಡು 145 ರನ್‌ ಗಳಿಸಲಷ್ಟೇ ಶಕ್ತವಾಯಿತು.

171 ರನ್ ಟಾರ್ಗೆಟ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್​ಗೆ ಮತ್ತೊಮ್ಮೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಪಿಲ್ ಸಾಲ್ಟ್ ಮತ್ತೊಮ್ಮೆ ಒಂದಂಕಿಗೆ ವಿಕೆಟ್ ಒಪ್ಪಿಸದರು. ಆದರೆ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ ಬೆನ್ ಡಕೆಟ್ 28 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 51 ರನ್ ಕಲೆಹಾಕಿದರು. ಲಿಯಾಮ್ ಲಿವಿಂಗ್‌ಸ್ಟನ್ ಕೂಡ 24 ಎಸೆತಗಳಲ್ಲಿ 43 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ವೇಳೆ ಲಿಯಾಮ್ ಲಿವಿಂಗ್​ಸ್ಟನ್ 1 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿದರು. ಕೊನೆಯಲ್ಲಿ ಆದಿಲ್ ರಶೀದ್ ಮತ್ತು ಮಾರ್ಕ್ ವುಡ್ ತಲಾ 10 ರನ್‌ಗಳ ಮಹತ್ವದ ಕೊಡುಗೆ ನೀಡಿದರು.

ವರುಣ್ 5 ವಿಕೆಟ್

ಮತ್ತೊಂದೆಡೆ, ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ವರುಣ್ ಚಕ್ರವರ್ತಿ ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲಿ 6 ರನ್​ಗಳ ಎಕಾನಮಿಯೊಂದಿಗೆ ಕೇವಲ 24 ರನ್‌ಗಳನ್ನು ನೀಡಿ 5 ವಿಕೆಟ್ ಉರುಳಿಸಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ, ರವಿ ಬಿಷ್ಣೋಯ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಉರುಳಿಸಿದರು.

ಭಾರತದ ಕಳಪೆ ಬ್ಯಾಟಿಂಗ್

172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದಿಂದ ಅತ್ಯಂತ ಕಳಪೆ ಬ್ಯಾಟಿಂಗ್ ಕಂಡುಬಂದಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 6 ಎಸೆತಗಳಲ್ಲಿ 3 ರನ್ ಗಳಿಸಲಷ್ಟೇ ಶಕ್ತರಾದರು. ಅಭಿಷೇಕ್ ಶರ್ಮಾ ಕೂಡ 14 ಎಸೆತಗಳಲ್ಲಿ 24 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಸೂರ್ಯಕುಮಾರ್ ಯಾದವ್ ಈ ಬಾರಿಯೂ 14 ರನ್ ಗಳಿಸಲಷ್ಟೇ ಶಕ್ತರಾದರು. ಮತ್ತೊಂದೆಡೆ ತಿಲಕ್ ವರ್ಮಾ 14 ಎಸೆತಗಳಲ್ಲಿ 18 ರನ್ ಗಳಿಸಿದರೆ, 35 ಎಸೆತಗಳಲ್ಲಿ 40 ರನ್ ಗಳಿಸುವಷ್ಟರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಕಳೆದುಕೊಂಡರು. ವಾಷಿಂಗ್ಟನ್ ಸುಂದರ್ 6 ರನ್ ಮತ್ತು ಅಕ್ಷರ್ ಪಟೇಲ್ ಕೇವಲ 5 ರನ್​ಗಳಿಸಲಷ್ಟೇ ಶಕ್ತರಾದರು. ಇದರಿಂದಾಗಿ ಭಾರತ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಗಿ 26 ರನ್‌ಗಳಿಂದ ಸೋಲನುಭವಿಸಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ