IND vs ENG: ಟೆಸ್ಟ್​ನಲ್ಲಿ ಅಶ್ವಿನ್ ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ..!

|

Updated on: Feb 16, 2024 | 10:46 PM

PM Modi: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಎರಡನೇ ದಿನದಂದು 37 ವರ್ಷದ ಅಶ್ವಿನ್, ಇಂಗ್ಲೆಂಡ್ ಆರಂಭಿಕ ಆಟಗಾರ ಜಾಕ್ ಕ್ರಾಲಿ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಗಡಿ ಮುಟ್ಟಿದ ವಿಶ್ವದ ಒಂಬತ್ತನೇ ಬೌಲರ್ ಎನಿಸಿಕೊಂಡರು.

IND vs ENG: ಟೆಸ್ಟ್​ನಲ್ಲಿ ಅಶ್ವಿನ್ ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ..!
ಆರ್. ಅಶ್ವಿನ್, ಪ್ರಧಾನಿ ಮೋದಿ
Follow us on

ರಾಜ್‌ಕೋಟ್‌ನಲ್ಲಿ (Rajkot) ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಭಾರತ (India vs England) ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಝಾಕ್ ಕ್ರೌಲಿ ವಿಕೆಟ್ ಪಡೆದ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಟೆಸ್ಟ್ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅನಿಲ್ ಕುಂಬ್ಳೆ ನಂತರ ಭಾರತ ಪರ 500 ಟೆಸ್ಟ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಮೂರನೇ ಆಫ್ ಸ್ಪಿನ್ನರ್ ಎನಿಸಿಕೊಂಡಿರುವ ಅಶ್ವಿನ್, ಕುಂಬ್ಳೆ ನಂತರ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಇದೀಗ ಅಶ್ವಿನ್ ಅವರ ಈ ಅಸಾಮಾನ್ಯ ಸಾಧನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ (PM Modi) ಕೂಡ ಹಾಡಿ ಹೊಗಳಿದ್ದಾರೆ.

ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ‘500 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಅಸಾಮಾನ್ಯ ಸಾಧನೆಗಾಗಿ ರವಿಚಂದ್ರನ್ ಅಶ್ವಿನ್ ಅವರಿಗೆ ಅಭಿನಂದನೆಗಳು. ಅವರ ಪ್ರಯಾಣ ಮತ್ತು ಸಾಧನೆಗಳು ಅವರ ಕೌಶಲ್ಯ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

500 ವಿಕೆಟ್‌ಗಳ ಗಡಿ ಮುಟ್ಟಿದ ಅಶ್ವಿನ್

ವಾಸ್ತವವಾಗಿ, ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ ಎರಡನೇ ದಿನದಂದು 37 ವರ್ಷದ ಅಶ್ವಿನ್, ಇಂಗ್ಲೆಂಡ್ ಆರಂಭಿಕ ಆಟಗಾರ ಜಾಕ್ ಕ್ರಾಲಿ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಗಡಿ ಮುಟ್ಟಿದ ವಿಶ್ವದ ಒಂಬತ್ತನೇ ಬೌಲರ್ ಎನಿಸಿಕೊಂಡರು. 2011ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅಶ್ವಿನ್ ತಮ್ಮ 98ನೇ ಟೆಸ್ಟ್​ನಲ್ಲಿ 500 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದಾರೆ. ತಮ್ಮ ಮೊದಲ 16 ಟೆಸ್ಟ್ ಪಂದ್ಯಗಳಲ್ಲಿ ಒಂಬತ್ತು ಬಾರಿ ಇನ್ನಿಂಗ್ಸ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಅಶ್ವಿನ್, ಕಡಿಮೆ ಇನ್ನಿಂಗ್ಸ್​ಗಳಲ್ಲಿ 300 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎನಿಸಿಕೊಂಡರು.

IND vs ENG: ಟೆಸ್ಟ್ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಆರ್​ ಅಶ್ವಿನ್..!

ಅಶ್ವಿನ್ ವೃತ್ತಿಜೀವನ

ಭಾರತದ ಪರ ಮೂರು ಮಾದರಿಯಲ್ಲೂ ಆಡಿರುವ ಅಶ್ವಿನ್ 116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್‌ಗಳನ್ನು ಮತ್ತು 65 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಮೂರನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುವುದಾದರೆ.. 5 ವಿಕೆಟ್ ಕಳೆದುಕೊಂಡು 326 ರನ್​ಗಳಿಂದ ಎರಡನೇ ದಿನದಾಟವನ್ನು ಪ್ರಾರಂಭಿಸಿದ ಭಾರತ ಮೊದಲ ಸೆಷನ್​ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 62 ರನ್ ಸೇರಿಸಿತು. ಆ ನಂತರ ಭಾರತದ ಬಾಲಂಗೋಚಿಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಭಾರತದ ಇನ್ನಿಂಗ್ಸ್ 445 ರನ್‌ಗಳಿಗೆ ಕೊನೆಗೊಂಡಿತು. ಇದೀಗ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಎರಡು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ. ಭಾರತಕ್ಕಿಂತ ಇನ್ನೂ 238 ರನ್‌ಗಳ ಹಿನ್ನಡೆಯಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Fri, 16 February 24