
ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮೂವರು ಆಟಗಾರರು ಕಾಣಿಸಿಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ತೌಬಾ ತೌಬಾ ಹಾಡಿಗೆ ಮೈ ಕೈ ನೋವನ್ನು ಪ್ರಸ್ತಾಪಿಸುವಂತೆ ಕಾಣಿಸಿಕೊಂಡಿದ್ದರು. ಆದರೆ ಈ ವೇಳೆ ತೋರಿಸಿದ ಚಲನವಲನವು ವಿಶೇಷಚೇತನರನ್ನು ಅವಮಾನಿಸಿದಂತಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ಯುವರಾಜ್ ಸಿಂಗ್, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ವಿರುದ್ಧ ರಾಷ್ಟ್ರೀಯ ಅಂಗವಿಕಲರ ಉದ್ಯೋಗ ಉತ್ತೇಜನ ಮಂಡಳಿಯ (NCPEDP) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ದೂರು ದಾಖಲಿಸಿದ್ದಾರೆ.
ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ 10 ಕೋಟಿಗೂ ಹೆಚ್ಚು ಅಂಗವಿಕಲರನ್ನು ಅವಮಾನಿಸಿ ತಮಾಷೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ನವದೆಹಲಿಯ ಅಮರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಹಾಗೆಯೇ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇನ್‌ಸ್ಟಾಗ್ರಾಮ್ (ಮೆಟಾ ಒಡೆತನ) ವಿರುದ್ಧ ಕೂಡ ದೂರನ್ನು ಸಲ್ಲಿಸಲಾಗಿದೆ. ವಿಕಲಚೇತನರನ್ನು ಅಮಾನಿಸಿದಂತಹ ವಿಡಿಯೋ ಇದ್ದರೂ, ಅದನ್ನು ಇನ್ಸ್ಟಾಗ್ರಾಮ್ನಲ್ಲಿ ನಿರ್ಬಂಧಿಸಲಾಗಿಲ್ಲ. ಹೀಗಾಗಿ ಮೆಟಾ ಕಂಪೆನಿ ವಿರುದ್ಧ ಕೂಡ ದೂರು ನೀಡಿದ್ದೇನೆ ಎಂದು ಅರ್ಮಾನ್ ಅಲಿ ತಿಳಿಸಿದ್ದಾರೆ.
ಯುವಿ, ಹರ್ಭಜನ್, ರೈನಾ ವಿಡಿಯೋದಲ್ಲಿ ಕಾಣಿಸಿಕೊಂಡ ಹಾವಭಾವ
ಹರ್ಭಜನ್ ಸಿಂಗ್ ಅವರು ಸಂಸದರು. ಅವರು ಅಂಗವಿಕಲರ ಪರವಾಗಿ ಧ್ವನಿ ಎತ್ತಬೇಕು. ಆದರೆ ಅವರು ಯಾವ ರೀತಿಯ ವಿಡಿಯೋವನ್ನು ಮಾಡುತ್ತಿದ್ದಾರೆ? ನೋಡಿ… ಭಾರತದಲ್ಲಿ, ವಿಕಲಾಂಗತೆಗಳ ಬಗ್ಗೆ ಅರಿವಿನ ತೀವ್ರ ಕೊರತೆಯಿದೆ. ಯಾವಾಗಲೂ ವಿಕಲಚೇತನರನ್ನು ತಮಾಷೆಯ ಭಾಗವಾಗಿ ಗೇಲಿ ಮಾಡುತ್ತೀರುತ್ತೀರಿ. ಇವೆಲ್ಲವೂ ನಿಲ್ಲಬೇಕೆಂಬುದು ನನ್ನ ಆಶಯ. ಹೀಗಾಗಿ ದೂರು ದಾಖಲಿಸಿದ್ದೇನೆ ಎಂದು ಅರ್ಮಾನ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಇತ್ತ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಹರ್ಭಜನ್ ಸಿಂಗ್ ಈ ವಿವಾದಾತ್ಮಕ ವೀಡಿಯೊವನ್ನು ಅಳಿಸಿ ಹಾಕಿದ್ದಾರೆ. ಅಲ್ಲದೆ ಯಾರಿಗೂ ನೋವು ಮಾಡುವ ಅಥವಾ ಯಾರನ್ನು ಗೇಲಿ ಮಾಡುವ ಉದ್ದೇಶ ಹೊಂದಿರಲಿಲ್ಲ. ನಾನು ಕಳೆದ 15 ದಿನಗಳಿಂದ ಕ್ರಿಕೆಟ್ ಆಡಿದ್ದರಿಂದ ನಮ್ಮ ಪರಿಸ್ಥಿತಿ ಹೀಗಾಗಿದೆ ಎಂದು ತೋರಿಸಲು ವಿಡಿಯೋ ಮಾಡಿದ್ದೇವೆ ಅಷ್ಟೇ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಹರ್ಭಜನ್ ಸಿಂಗ್ ಕ್ಷಮೆಯಾಚಿಸಿದ್ದಾರೆ.
Published On - 11:19 am, Tue, 16 July 24