ಒಂದು ಕಾಲದಲ್ಲಿ ಟೀಂ ಇಂಡಿಯಾದ (Team India) ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಡೆಲ್ಲಿ ಡ್ಯಾಶರ್ ಪೃಥ್ವಿ ಶಾಗೆ (Prithvi Shaw) ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ . 2018ರಲ್ಲಿ ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಪೃಥ್ವಿಗೆ ಅದೇ ವರ್ಷದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತ್ತು. ಇದೇ ವೆಸ್ಟ್ ಇಂಡೀಸ್ ವಿರುದ್ಧವೇ ತಾನು ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಶಾ, ಟೀಂ ಇಂಡಿಯಾಕ್ಕೆ ಉತ್ತಮ ಆರಂಭಿಕನಾಗುವ ಸೂಚನೆ ನೀಡಿದ್ದರು. ಆದರೆ ನಂತರ ಪೃಥ್ವಿ ಅವರ ವೃತ್ತಿಜೀವನದ ಗ್ರಾಫ್ ಮೇಲೇರುವ ಬದಲು, ಹಂತಹಂತವಾಗಿ ಕುಸಿಯಲಾರಂಭಿಸಿತು. ಹೀಗಾಗಿ ಪೃಥ್ವಿಗೆ ಟೀಂ ಇಂಡಿಯಾದ ಕದ ಮುಚ್ಚಲಾರಂಭಿಸಿತು. ಇತ್ತ ಐಪಿಎಲ್ನಲ್ಲಿ ಪೃಥ್ವಿ ಬ್ಯಾಟ್ ಸದ್ದು ಮಾಡಲಿಲ್ಲ. ಹೀಗಾಗಿ ಮತ್ತೆ ಟೀಂ ಇಂಡಿಯಾಕ್ಕೆ ಮರಳಲು ನಾನಾ ಕಸರತ್ತು ಮಾಡುತ್ತಿರುವ ಪೃಥ್ವಿ, ಕೌಂಟಿ ಕ್ರಿಕೆಟ್ನತ್ತ (County stint) ಮುಖ ಮಾಡಿದ್ದು, ಅಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ.
ದೇಶಿ ಕ್ರಿಕೆಟ್ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿದ ಪೃಥ್ವಿ ಶಾ ಇದೀಗ ಇಂಗ್ಲೆಂಡ್‌ನ ಕೌಂಟಿ ತಂಡವಾದ ನಾರ್ಥಾಂಪ್ಟನ್‌ಶೈರ್ ಪರ ಏಕದಿನ ಕಪ್‌ನಲ್ಲಿ ಆಡುತ್ತಿದ್ದಾರೆ. ತಾನು ಆಡಿದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಪೃಥ್ವಿ, ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
Duleep Trophy: ‘ಪೂಜಾರ ಸರ್ ನನ್ನಂತೆ ಬ್ಯಾಟ್ ಮಾಡಲು ಸಾಧ್ಯವಿಲ್ಲ’! ಸ್ಫೋಟಕ ಹೇಳಿಕೆ ನೀಡಿದ ಪೃಥ್ವಿ ಶಾ
ಗ್ಲೌಸೆಸ್ಟರ್‌ಶೈರ್ ತಂಡದ ವಿರುದ್ಧ ನಡೆಯಲ್ಲಿರುವ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಶಾ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಪಂದ್ಯದಲ್ಲಿ ಶಾ 39 ಎಸೆತಗಳಲ್ಲಿ 65 ರನ್‌ಗಳ ಇನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು. ಹಸನ್ ಆಜಾದ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಮೊದಲ ವಿಕೆಟ್‌ಗೆ 99 ರನ್ ಜೊತೆಯಾಟವನ್ನು ಹಂಚಿಕೊಂಡರು.
ಈ ಪಂದ್ಯದಲ್ಲಿ ಮತ್ತೊಬ್ಬ ಆರಂಭಿಕನಾಗಿ ಕಣಕ್ಕಿಳಿದಿದ್ದ ಆಜಾದ್, 130 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 113 ರನ್ ಸಿಡಿಸಿದರು. ಆದರೆ, ಇವರಿಬ್ಬರನ್ನು ಬಿಟ್ಟರೆ ತಂಡದ ಬೇರಾವ ಬ್ಯಾಟ್ಸ್‌ಮನ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನಾರ್ಥಾಂಪ್ಟನ್ ಶೈರ್ ತಂಡ 305 ರನ್ ಕಲೆಹಾಕಿತು.
ಭಾರತ ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಿತ್ತು. ಇದರಲ್ಲಿ ಪೃಥ್ವಿ ಶಾ ಕೂಡ ತಂಡದಲ್ಲಿ ಆಯ್ಕೆಯಾಗಿದ್ದರು. ಆದರೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಈ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಭಾಗವಹಿಸುತ್ತಿದೆ. ಇದಕ್ಕಾಗಿ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಅನೇಕ ಅನುಭವಿಗಳ ಅನುಪಸ್ಥಿತಿಯಲ್ಲೂ ಶಾ, ಆ ತಂಡದಲ್ಲಿಯೂ ಸ್ಥಾನ ಪಡೆದಿಲ್ಲ. ಅಲ್ಲದೆ ಆರಂಭಿಕ ಸ್ಥಾನಕ್ಕೆ ಹಲವು ಆಟಗಾರರು ಪೈಪೋಟಿ ನಡೆಸುತ್ತಿರುವುದರಿಂದ ಪೃಥ್ವಿಗೆ ಟೀಂ ಇಂಡಿಯಾ ಕದ ತೆರೆಯುವುದು ಕೊಂಚ ಅನುಮಾನವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ