ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ದಕ್ಷಿಣ ಆಫ್ರಿಕಾ ಗೆಲುವಿನೊಂದಿಗೆ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಚಟ್ಟೋಗ್ರಾಮ್‌ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಇವತ್ತೇ ಐಸಿಸಿ ಟೆಸ್ಟ್ ಬೌಲರ್ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿರುವ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ ಇನಿಂಗ್ಸ್‌ನ ಮೊದಲ ಎಸೆತದಲ್ಲಿ 10 ರನ್ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ರೀತಿಯ ಘಟನೆ ನಡೆದಿರುವುದು ತೀರ ಅಪರೂಪ. ಇದೀಗ ಈ ಅಪರೂಪದ ದಾಖಲೆ ರಬಾಡ ಖಾತೆ ಸೇರಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 575 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶದ ಪರ ಶದ್ಮನ್ ಇಸ್ಲಾಂ ಮತ್ತು ಮಹಮ್ಮದುಲ್ ಹಸನ್ ಜಾಯ್ ಇನ್ನಿಂಗ್ಸ್ ಆರಂಭಿಸಿದರು. ಈ ವೇಳೆ ಆಫ್ರಿಕಾ ಪರ ಕಗಿಸೊ ರಬಾಡ ಇನ್ನಿಂಗ್ಸ್‌ನ ಮೊದಲ ಓವರ್ ಬೌಲ್ ಮಾಡಲು ಅಖಾಡಕ್ಕಿಳಿದರು. ರಬಾಡ ತಮ್ಮ ಓವರ್‌ನ ಮೊದಲ ಎಸೆತದಲ್ಲಿ ಡಾಟ್ ಬೌಲ್ ಮಾಡಿದರು. ಆದರೆ ತಂಡದ ಸಹ ಆಟಗಾರ ಸೆನುರಾನ್ ಮುತ್ತುಸಾಮಿ ಪಿಚ್‌ನ ಮಧ್ಯದಲ್ಲಿ ಓಡಿದ ಕಾರಣಕ್ಕಾಗಿ ಅಂಪೈರ್‌ಗಳು ಬಾಂಗ್ಲಾದೇಶ ತಂಡಕ್ಕೆ 5 ರನ್‌ಗಳನ್ನು ಪೆನಾಲ್ಟಿಯಾಗಿ ನೀಡಿದರು. ಹೀಗಾಗಿ ಬಾಂಗ್ಲಾದೇಶದ ಇನ್ನಿಂಗ್ಸ್ 5 ರನ್ ಗಳಿಂದ ಆರಂಭವಾಯಿತು.
ಆದರೆ ಎರಡನೇ ಎಸೆತದಲ್ಲಿ ಕಗಿಸೊ ರಬಾಡ ಮಾಡಿದ ತಪ್ಪಿನಿಂದ ಬಾಂಗ್ಲಾ ತಂಡಕ್ಕೆ ಮತ್ತೆ 5 ರನ್ಗಳು ಉಚಿತವಾಗಿ ಸಿಕ್ಕಿದವು. ಈ ಓವರ್‌ನ ಎರಡನೇ ಎಸೆತವನ್ನು ರಬಾಡ ವೈಡ್ ಬಾಲ್ ಬೌಲ್ ಮಾಡಿದರು. ಈ ಬಾಲ್ ಪಿಚ್ನಿಂದ ದೂರ ಬಿದ್ದ ಕಾರಣ ವಿಕೆಟ್ಕೀಪರ್ಗೂ ಈ ಬಾಲನ್ನು ಹಿಡಿಯಲಾಗಲಿಲ್ಲ. ಹೀಗಾಗಿ ಚೆಂಡು ಬೌಂಡರಿ ಮುಟ್ಟಿತು. ಇದರಿಂದ ಬೈ ರೂಪದಲ್ಲಿ 4 ರನ್ ಸಿಕ್ಕರೆ, 1 ರನ್ ವೈಡ್ನಿಂದ ಸಿಕ್ಕಿತು. ಹೀಗಾಗಿ ಬಾಂಗ್ಲಾದೇಶ ತಂಡ ಈ ಚೆಂಡಿನಲ್ಲೂ 5 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದು, 1 ಎಸೆತದಲ್ಲಿ 10 ರನ್ ತನ್ನ ಖಾತೆಗೆ ಸೇರ್ಪಡೆಗೊಂಡಿತು. ವಾಸ್ತವವಾಗಿ ಈ ರೀತಿ ಘಟನೆಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಕಾಣಸಿಗುವುದು ತೀರ ಅಪರೂಪ. ಏಕೆಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವೊಂದು ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ 10 ರನ್ ಕಲೆಹಾಕಿದ ಘಟನೆಗಳು ಸಿಗುವುದು ವಿರಳಾತಿವಿರಳ.
Bangladesh started their innings with 10 runs on the board with no batter hitting a ball. 😄
– 5 runs through penalty, and 5 through No Ball + four form Rabada.pic.twitter.com/U3waKboV05
— Mufaddal Vohra (@mufaddal_vohra) October 30, 2024
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತನ್ನ ಆಯ್ಕೆಗೆ ನ್ಯಾಯ ಒದಗಿಸಿದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 575 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ವೇಳೆ ಟೋನಿ ಡಿ ಜಾರ್ಜಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ವಿಯಾನ್ ಮುಲ್ಡರ್ ಶತಕದ ಇನ್ನಿಂಗ್ಸ್ ಆಡಿದರು. ಟೋನಿ ಡಿ ಜೋರ್ಜಿ 269 ಎಸೆತಗಳಲ್ಲಿ 177 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ 106 ರನ್ ಕೊಡುಗೆ ನೀಡಿದರು. ವಿಯಾನ್ ಮುಲ್ಡರ್ 105 ರನ್ ಗಳಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ