ಐಪಿಎಲ್ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನು ಬಿಡುಗಡೆ ಮಾಡಲು ಇನ್ನೊಂದೆ ದಿನ ಬಾಕಿ ಉಳಿದಿದೆ. ನಾಳೆ ಅಂದರೆ ಅಕ್ಟೋಬರ್ 31 ರ 5 ಗಂಟೆಯೊಳಗೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿ ಉಳಿಸಿಕೊಂಡ ಹಾಗೂ ಆರ್ಟಿಎಮ್ ಆಯ್ಕೆಯಾಗಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಅಳೆದು ತೂಗಿ ತಂಡಕ್ಕೆ ಅಗತ್ಯವಿರುವವರನ್ನು ಉಳಿಸಿಕೊಳ್ಳಲು ಮುಂದಾಗಿವೆ. ಅದರಂತೆ ಇದುವರೆಗೆ ಒಮ್ಮೆಯೂ ಚಾಂಪಿಯನ್ ಆಗದ ಆರ್‌ಸಿಬಿ ಕೂಡ ಈ ಬಾರಿಯಾದರೂ ಟ್ರೋಫಿನ ಎತ್ತಿಹಿಡಿಯುವ ಸಲುವಾಗಿ ಬಲಿಷ್ಠ ಟೀಂ ಕಟ್ಟಲು ತಯಾರಿ ನಡೆಸಿದೆ. ಆದರೆ ಅದಕ್ಕೂ ಮುನ್ನ ಫ್ರಾಂಚೈಸಿ, ತನ್ನ ಧಾರಣ ಪಟ್ಟಿಯಲ್ಲಿ ಯಾರ್ಯಾರನ್ನು ಉಳಿಸಿಕೊಂಡಿದೆ ಎಂಬ ವರದಿಯನ್ನು ನೀಡಬೇಕು. ಈ ಪಟ್ಟಿ ನೀಡಲು ಒಂದು ದಿನ ಬಾಕಿ ಇರುವಾಗಲೆ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಪೋಸ್ಟ್ವೊಂದನ್ನು ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ.
ಪ್ರಸ್ತುತ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಈ ಬಾರಿ ಆರ್‌ಸಿಬಿ ನಾಲ್ವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಚಿಂತಿಸಿದೆ ಎಂಬ ವರದಿ ಇದೆ. ಅದರ ಪ್ರಕಾರ, ಮೊದಲ ಆಯ್ಕೆಯಾಗಿ ವಿರಾಟ್ ಕೊಹ್ಲಿ ತಂಡದಲ್ಲಿರುವುದು ಖಚಿತವಾಗಿದೆ. ಎರಡನೇ ಆಯ್ಕೆಯಾಗಿ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಳ್ಳಲು ತಂಡ ಮುಂದಾಗಿದೆ. ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ರಜತ್ ಪಾಟಿದರ್ ಹಾಗೂ ವಿಲ್ ಜಾಕ್ಸ್ ಇರಬಹುದು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಅನ್ಕ್ಯಾಪ್ಡ್ ಆಟಗಾರನಾಗಿ ಯಶ್ ದಯಾಳ್ ತಂಡದಲ್ಲಿ ಉಳಿಯಬಹುದು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.
ಆದರೀಗ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿರುವ ಆರ್‌ಸಿಬಿ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪಝಲ್ ರೀತಿಯ ಪೋಸ್ಟ್ವೊಂದನ್ನು ಹಂಚಿಕೊಂಡಿದೆ. ಈ ಪಝಲ್ ಗೇಮ್ನಲ್ಲಿ ತಂಡ ಉಳಿಸಿಕೊಳ್ಳಬಹುದಾದ ಆಟಗಾರರ ಹೆಸರನ್ನು ಅಡಗಿಟ್ಟಿಸಿದೆ. ಅದರಲ್ಲಿ ಹುಡುಕಿದಾಗ ಒಟ್ಟಾರೆ 8 ಆಟಗಾರರ ಹೆಸರು ಪತ್ತೆಯಾಗಿದೆ. ಆದರೆ ಫ್ರಾಂಚೈಸಿಯೊಂದು ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆ 6 ಮಾತ್ರ. ಹೀಗಾಗಿ ಆರ್‌ಸಿಬಿ ತಾನು ಪಟ್ಟಿ ಮಾಡಿರುವ ಈ 8ಆಟಗಾರರಲ್ಲಿ ಯಾರನ್ನು ಉಳಿಸಿಕೊಳ್ಳಲಿದೆ ಎಂಬುದು ನಾಳೆಯೇ ಗೊತ್ತಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Wed, 30 October 24