ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಅವರಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳಿಂದ ಕಂಗೊಳಿಸುತ್ತಿರುವ ಮುಂಬೈ ತಂಡ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಪಾಂಡ್ಯ ಬ್ರದರ್ಸ್ ನೇತೃತ್ವದ ಬರೋಡಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಮುಂಬೈ ತಂಡ ಎರಡನೇ ಬಾರಿಗೆ ಈ ಟ್ರೋಫಿಯ ಫೈನಲ್ ತಲುಪಿದೆ. ಈ ಹಿಂದೆ 2022-23ರಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಮುಂಬೈ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು. ಇತ್ತ ಮುಂಬೈ ವಿರುದ್ಧ ಸೋತಿರುವ ಬರೋಡಾ ತಂಡ ಆರನೇ ಬಾರಿಗೆ ಫೈನಲ್ ಆಡುವ ಅವಕಾಶದಿಂದ ವಂಚಿತವಾಗಿದೆ.
ಉಭಯ ತಂಡಗಳ ನಡುವೆ ನಡೆದ ಈ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಗೆಲುವಿನಲ್ಲಿ ಅಜಿಂಕ್ಯ ರಹಾನೆ ಅವರ ಪಾತ್ರ ಅಪಾರವಾಗಿತ್ತು. ಈ ಪಂದ್ಯದಲ್ಲೂ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ ರಹಾನೆ ಮೊದಲಿಗೆ, ಅಯ್ಯರ್ ಅವರೊಂದಿಗೆ ಎರಡನೇ ವಿಕೆಟ್‌ಗೆ 88 ರನ್‌ಗಳ ಜೊತೆಯಾಟವನ್ನು ಮಾಡಿದರು. ಇದರ ಜೊತೆಗೆ ತಂಡದ ಸ್ಕೋರ್ ಅನ್ನು 118 ರನ್‌ಗಳಿಗೆ ಕೊಂಡೊಯ್ದರು. ಈ ವೇಳೆ ರಹಾನೆ 56 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 98 ರನ್ ಗಳಿಸಿ ಕೇವಲ 2 ರನ್ಗಳಿಂದ ಶತಕವಂಚಿತಾದರು.
ರಹಾನೆ ಜೊತೆ ಉತ್ತಮ ಜೊತೆಯಾಟ ಕಟ್ಟಿದ ಶ್ರೇಯಸ್ ಅಯ್ಯರ್ ಕೂಡಲೇ 30 ಎಸೆತಗಳಲ್ಲಿ 46 ರನ್‌ಗಳ ಕಾಣಿಕೆ ನೀಡಿದರು. ಇದರಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಇತ್ತ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸೆಮಿಫೈನಲ್‌ನಲ್ಲಿಯೂ ವಿಫಲರಾದರು. ಅಂತಿಮವಾಗಿ ಮುಂಬೈ ತಂಡ 17.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಹೀಗಾಗಿ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಬರೋಡಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಬರೋಡಾ ಪರ ಕೃನಾಲ್ ಪಾಂಡ್ಯ 30 ರನ್ ಗಳಿಸಿದರು. ಆದರೆ ತಂಡದ ಸ್ಟಾರ್ ಬ್ಯಾಟರ್ ಹಾರ್ದಿಕ್ ಪಾಂಡ್ಯ ಈ ಮಹತ್ವದ ಪಂದ್ಯದಲ್ಲಿ ಎರಡಂಕಿಯನ್ನು ಮುಟ್ಟಲಿಲ್ಲ. ಹಾರ್ದಿಕ್ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು. ಶಿವಾಲಿಕ್ ಶರ್ಮಾ 36 ರನ್ ಗಳಿಸಿ ಬರೋಡಾ ಪರ ಅಗ್ರ ಸ್ಕೋರರ್ ಎನಿಸಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Fri, 13 December 24