
ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ (Ajinkya Rahane) ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯಲು ಹೆಣಗಾಡುತ್ತಿದ್ದ ರಹಾನೆಗೆ ಯಾವುದೇ ಸ್ಥಾನ ಸಿಗಲಿಲ್ಲ. ಹೀಗಾಗಿ ರಹಾನೆ ತಮ್ಮ ಭವಿಷ್ಯವನ್ನು ಪರಿಗಣಿಸಿ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಅಜಿಂಕ್ಯ ರಹಾನೆ ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು 6 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ಪರ ಆಡಿದ ಅಜಿಂಕ್ಯ ರಹಾನೆ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ ನಂತರ ತಮ್ಮ 38 ನೇ ವಯಸ್ಸಿನಲ್ಲಿ ಕ್ರಿಕೆಟ್ ನಿಲ್ಲಿಸಲು ನಿರ್ಧರಿಸಿದ್ದಾರೆ. ರಹಾನೆ ನಿವೃತ್ತಿಯ ಬಗ್ಗೆ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರು ಏನು ಹೇಳಿದ್ದಾರೆ ಎಂಬುದನ್ನು ನೋಡುವುದಾದರೆ..
ರಹಾನೆ ನಿವೃತ್ತಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ‘ನಿಮ್ಮ ಗಮನಾರ್ಹ ವೃತ್ತಿಜೀವನಕ್ಕೆ ಅಭಿನಂದನೆಗಳು. ಅಜಿಂಕ್ಯ, ನಾವು ಮೊದಲ ಬಾರಿಗೆ ಮುಂಬೈ ಪರ ಬ್ಯಾಟಿಂಗ್ ಮಾಡಿದಾಗ, ಅವಕಾಶಗಳ ಹಿಂದೆ ಓಡದ ವ್ಯಕ್ತಿಯನ್ನು ನಾನು ನಿನ್ನಲ್ಲಿ ನೋಡಿದೆ. ತಂಡಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಲು ನೀವು ಸಿದ್ಧರಿದ್ದರಿಂದ ಅವಕಾಶಗಳು ನಿನ್ನನ್ನು ಅರಸಿ ಬರುತ್ತಿದ್ದವು. ತಾಳ್ಮೆ ಆಕ್ರಮಣಶೀಲತೆಗೆ ವಿರುದ್ಧವಲ್ಲ ಎಂದು ನೀನು ತೋರಿಸಿದ್ದೀಯ. ತಾಳ್ಮೆಯು ತಂಡಕ್ಕೆ ನಿರ್ಭೀತರಾಗಿರಲು ಆತ್ಮವಿಶ್ವಾಸವನ್ನು ನೀಡುವಂತದ್ದು. ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು’ ಎಂದಿದ್ದಾರೆ.
ಇತ್ತ ರಹಾನೆ ಜೊತೆ ಆಡಿದ ವಿರಾಟ್ ಕೊಹ್ಲಿ ಕೂಡ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ‘ಜಿಂಕ್ಸ್, ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು, ಸ್ನೇಹಿತ. ನೀವು ಭಾರತೀಯ ಕ್ರಿಕೆಟ್ಗಾಗಿ ಅದ್ಭುತ ಕೆಲಸ ಮಾಡಿದ್ದೀರಿ, ಮತ್ತು ನಿಮ್ಮ ಪ್ರಯಾಣದ ಬಗ್ಗೆ ನೀವು ಹೆಮ್ಮೆಪಡಬೇಕು. ಸ್ಲಿಪ್ಸ್ನಲ್ಲಿ ಅತ್ಯಂತ ವಿಶ್ವಾಸಾರ್ಹ ಫೀಲ್ಡರ್ ಮತ್ತು ಟೆಸ್ಟ್ನಲ್ಲಿ ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರ. ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಬರೆದುಕೊಂಡಿದ್ದಾರೆ.
ಬಿಸಿಸಿಐ ಕೂಡ ರಹಾನೆಯ ವೃತ್ತಿಜೀವನಕ್ಕೆ ಅಭಿನಂದನೆ ಸಲ್ಲಿಸಿದ್ದು, ‘ ಅದ್ಭುತ ವೃತ್ತಿಜೀವನ ಕೊನೆಗೊಳುತ್ತಿದೆ. ಭಾರತೀಯ ಕ್ರಿಕೆಟ್ಗೆ ನಿಮ್ಮ ಮಹತ್ವದ ಕೊಡುಗೆಗಾಗಿ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಎಲ್ಲಾ ಸ್ಮರಣೀಯ ಕ್ಷಣಗಳಿಗಾಗಿ ಧನ್ಯವಾದಗಳು. ನಿಮ್ಮ ಮುಂದಿನ ಪ್ರಯಾಣಕ್ಕೆ ಶುಭಾಶಯಗಳು’ ಎಂದು ಬರೆದುಕೊಂಡಿದೆ.