Rahul Dravid: ರಾಹುಲ್ ದ್ರಾವಿಡ್ ಅವರ ವಿದಾಯ ಭಾಷಣದ ಮುಖ್ಯಾಂಶಗಳು

|

Updated on: Jul 03, 2024 | 8:37 AM

Rahul Dravid: ವಿಶ್ವಕಪ್ ಗೆಲ್ಲಬೇಕೆಂಬ ರಾಹುಲ್ ದ್ರಾವಿಡ್ ಅವರ ಬಹುದೊಡ್ಡ ಕನಸು ಕೊನೆಗೂ ಈಡೇರಿದೆ. ಈ ಹಿಂದೆ ಭಾರತದ ಪರ ಮೂರು ಏಕದಿನ ವಿಶ್ವಕಪ್​ ಟೂರ್ನಿಗಳನ್ನು ಆಡಿದರೂ ದ್ರಾವಿಡ್ ಅವರಿಗೆ ವಿಶ್ವ ಎತ್ತಿ ಹಿಡಿಯುವ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಟೀಮ್ ಇಂಡಿಯಾ ಕೋಚ್ ಆಗಿ ಟಿ20 ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಸಫಲರಾಗಿದ್ದಾರೆ.

Rahul Dravid: ರಾಹುಲ್ ದ್ರಾವಿಡ್ ಅವರ ವಿದಾಯ ಭಾಷಣದ ಮುಖ್ಯಾಂಶಗಳು
Rahul Dravid
Follow us on

ಟಿ20 ವಿಶ್ವಕಪ್ ಗೆಲುವಿನೊಂದಿಗೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಕಾರ್ಯಾವಧಿ ಮುಗಿದಿದೆ. ಈ ಕಾರ್ಯಾವಧಿ ಮುಕ್ತಾಯದೊಂದಿಗೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಕಾಣಿಸಿಕೊಂಡ ದ್ರಾವಿಡ್ ತಮ್ಮ ವಿದಾಯ ಭಾಷಣ ಮಾಡಿದ್ದಾರೆ.  ಈ ವೇಳೆ ಟೀಮ್ ಇಂಡಿಯಾ ಆಟಗಾರರಿಗೆ ಕೆಲ ಕಿವಿಮಾತುಗಳನ್ನು ಹೇಳುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ವಿದಾಯ ಭಾಷಣದ 5 ಮುಖ್ಯಾಂಶಗಳನ್ನು ನೋಡುವುದಾದರೆ…

ಭಾವುಕರಾದ ದ್ರಾವಿಡ್:

ರಾಹುಲ್ ದ್ರಾವಿಡ್ ತಮ್ಮ ವಿದಾಯ ಭಾಷಣದಲ್ಲಿ ತುಂಬಾ ಭಾವುಕರಾಗಿದ್ದರು. ಈ ಭಾವುಕತೆಯೊಂದಿಗೆ ಮಾತನಾಡಿದ ಟೀಮ್ ಇಂಡಿಯಾ ಕೋಚ್, ವೃತ್ತಿಜೀವನದ ಕೊನೆಯಲ್ಲಿ, ಯಾವುದೇ ರನ್ ಅಥವಾ ದಾಖಲೆಗಳನ್ನು ನೆನಪಿರುವುದಿಲ್ಲ. ಬದಲಾಗಿ ಇಂತಹ ಕ್ಷಣಗಳು ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ಹೀಗಾಗಿ ಈ ಗೆಲುವನ್ನು ಪೂರ್ಣವಾಗಿ ಆನಂದಿಸಬೇಕೆಂದು ತಿಳಿಸಿದರು.

ಕೆಚ್ಚೆದೆಯ ಹೋರಾಟ:

ದ್ರಾವಿಡ್ ತಮ್ಮ ಕೊನೆಯ ಭಾಷಣದಲ್ಲಿ ಕಳೆದ ಎರಡು ವರ್ಷಗಳ ಹೋರಾಟವನ್ನು ನೆನಪಿಸಿಕೊಂಡರು. ಈ ವೇಳೆ ಇಡೀ ತಂಡದ ಹಾಗೂ ಸಹಾಯಕ ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಿದರು. ಇತ್ತೀಚಿನ ದಿನಗಳಲ್ಲಿ ತಂಡವು ಉತ್ತಮವಾಗಿ ಆಡಿದೆ. ಅನೇಕ ಬಾರಿ ಟ್ರೋಫಿಯ ಸಮೀಪಕ್ಕೆ ತಲುಪಿದ್ದವು. ಆದರೆ ಆ ಗೆರೆಯನ್ನು ದಾಟಲು ಸಾಧ್ಯವಾಗಲಿಲ್ಲ. ಈಗ ಎಲ್ಲರೂ ಆ ಕೆಲಸವನ್ನು ಮಾಡಿದ್ದಾರೆ. ಇದೀಗ ಇಡೀ ದೇಶವೇ ನಮ್ಮ ಬಗ್ಗೆ ಹೆಮ್ಮೆಪಡುತ್ತಿದೆ ಎಂದು ಸಂತಸ ಹಂಚಿಕೊಂಡರು.

ಧನ್ಯವಾದ ಅರ್ಪಣೆ:

ಟೀಮ್ ಇಂಡಿಯಾವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ದ್ರಾವಿಡ್, ಈ ಟ್ರೋಫಿಗಾಗಿ ಎಲ್ಲರ ಕುಟುಂಬವು ಸಾಕಷ್ಟು ಹೋರಾಟ ಮಾಡಿದೆ. ಅವರ ಕೊಡುಗೆಗಳಿಗೆ ಸಮರ್ಪಣ ಪದಗಳಿಲ್ಲ. ಅಂತಿಮವಾಗಿ ಅವರೆಲ್ಲರಿಗೂ ಅಮೂಲ್ಯ ಕೊಡುಗೆ ನೀಡಿದ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದರು.

ರೋಹಿತ್​ಗೆ ಧನ್ಯವಾದ:

ಈ ವೇಳೆ ದ್ರಾವಿಡ್ ಕೂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿ ಧನ್ಯವಾದ ತಿಳಿಸಿದರು. ರೋಹಿತ್ ನನಗೆ ಕರೆ ಮಾಡಿ 2024ರ ಟಿ20 ವಿಶ್ವಕಪ್ ವರೆಗೂ ಕೋಚ್ ಆಗಿರುವಂತೆ ಕೇಳಿಕೊಂಡಿದ್ದರು. ಅಂದು ನನಗೆ ಮನವಿ ಮಾಡಿ, ತಂಡದ ಕೋಚ್ ಆಗಿ ಮುಂದುವರೆಯುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದರು.

ಇದನ್ನೂ ಓದಿ: IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಹೊಸ ಡಿಮ್ಯಾಂಡ್

ಟೀಮ್ ಇಂಡಿಯಾಗೆ ಕಿವಿಮಾತು:

ಅಂತ್ಯದಲ್ಲಿ ರಾಹುಲ್ ದ್ರಾವಿಡ್ ಎಲ್ಲಾ ಆಟಗಾರರನ್ನು ತಂಡವಾಗಿ ಒಗ್ಗಟ್ಟಿನಿಂದ ಇರುವಂತೆ ಕೇಳಿಕೊಂಡರು. ಈ ಗೆಲುವು ಯಾವುದೇ ಒಬ್ಬ ವ್ಯಕ್ತಿಯ ಗೆಲುವಲ್ಲ. ಇಡೀ ತಂಡ ಒಟ್ಟಾಗಿ ಈ ಯಶಸ್ಸನ್ನು ಸಾಧಿಸಿದೆ. ಆದ್ದರಿಂದ ಯಾವಾಗಲೂ ತಂಡವಾಗಿ ಆಡಬೇಕು ಎಂದು ಕಿವಿಮಾತು ಹೇಳಿದರು. ಈ ಸಲಹೆಯೊಂದಿಗೆ ಟೀಮ್ ಇಂಡಿಯಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿ ರಾಹುಲ್ ದ್ರಾವಿಡ್ ತಮ್ಮ ವಿದಾಯ ಭಾಷಣ ಕೊನೆಗೊಳಿಸಿದರು.